ಹೊಸದಿಗಂತ ಬೆಳಗಾವಿ:
ಸಮಾಜದಲ್ಲಿ ಹೆಣ್ಣುಮಕ್ಕಳ ರಕ್ಷಣೆ ಎಷ್ಟು ಮುಖ್ಯ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಪ್ರಾಪ್ತ ಬಾಲಕಿಯ ಮುಂದೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದ ಗಣೇಶಪುರದ ಕಾಮುಕನಿಗೆ ಬೆಳಗಾವಿಯ ಪೋಕ್ಸೋ ನ್ಯಾಯಾಲಯ ಸರಿಯಾದ ಪಾಠ ಕಲಿಸಿದೆ.
ಕಳೆದ 2022ರ ಮಾರ್ಚ್ 8 ರಂದು ಗಣೇಶಪುರ ಲಕ್ಷ್ಮೀನಗರದ ನಿವಾಸಿ ಸಚಿನ್ ಕಾಕತ್ಕರ್ (30) ಎಂಬಾತ, ಬಾಲಕಿಯೊಬ್ಬಳಿಗೆ ಅಸಭ್ಯವಾಗಿ ವರ್ತಿಸಿ ಗುಪ್ತಾಂಗ ಪ್ರದರ್ಶಿಸಿದ್ದ. ಅಷ್ಟೇ ಅಲ್ಲದೆ, ಬಾಲಕಿಯ ಕುಟುಂಬದವರಿಗೂ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ್ದ. ಈ ಬಗ್ಗೆ ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಸಿ. ಎಂ. ಪುಷ್ಪಲತಾ ಅವರು, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಆರೋಪಿಗೆ ಈ ಕೆಳಗಿನ ಶಿಕ್ಷೆ ಪ್ರಕಟಿಸಿದ್ದಾರೆ:
ಐಪಿಸಿ ಮತ್ತು ಪೋಕ್ಸೋ ಕಾಯ್ದೆಯಡಿ ಒಟ್ಟು 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ. ಒಟ್ಟು 20,000 ರೂ. ದಂಡ (ದಂಡ ಕಟ್ಟದಿದ್ದರೆ ಹೆಚ್ಚುವರಿ 6 ತಿಂಗಳು ಜೈಲು). ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ 1 ಲಕ್ಷ ರೂಪಾಯಿ ಪರಿಹಾರ ನೀಡಲು ಕೋರ್ಟ್ ಆದೇಶಿಸಿದೆ.
ತನಿಖಾಧಿಕಾರಿಗಳಾದ ಪಿಎಸ್ಐ ಎಸ್. ಎನ್. ಬಸ್ವಾ ಅವರು ಸಲ್ಲಿಸಿದ್ದ ಬಲವಾದ ದೋಷಾರೋಪಣೆ ಪಟ್ಟಿ ಮತ್ತು ಸಾಕ್ಷಿಗಳು ಆರೋಪಿಗೆ ಶಿಕ್ಷೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿವೆ.



