March 25, 2026
Wednesday, March 25, 2026
spot_img

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತುಮಕೂರು ಡಿಎಚ್‌ಒ ಕಚೇರಿ ವ್ಯವಸ್ಥಾಪಕ

ಹೊಸದಿಗಂತ ವರದಿ, ತುಮಕೂರು:

ಆರೋಗ್ಯ ಜಾಗೃತಿ ವಸ್ತು ಪ್ರದರ್ಶನದ ಬಿಲ್ ಪಾವತಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಲೆಕ್ಕಪತ್ರ ವಿಭಾಗದ ವ್ಯವಸ್ಥಾಪಕ ಎಂ.ಎಚ್.ಅರವಿಂದ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಗರದ ಡಿಎಚ್‌ಒ ಕಚೇರಿಯ ಆವರಣದಲ್ಲಿ ಕೆ. ರಾಜಶೇಖರ್ ಎಂಬುವರಿಂದ 12 ಸಾವಿರ ಲಂಚದ ಹಣ ತೆಗೆದುಕೊಳ್ಳುವ ಸಮಯದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದು, ವಿಚಾರಣೆ ನಂತರ ಬಂಧಿಸಿದ್ದಾರೆ.

ತಿಪಟೂರಿನ ಡಾ.ಬಿ.ಆರ್. ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ರಾಜಶೇಖರ್ ಎಂಬುವರು 2025-26ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲೆಯ ಎಲ್ಲ 10 ತಾಲೂಕುಗಳಲ್ಲಿ ನಡೆಯುವ ಜಾತ್ರೆ, ಸಂತೆಗಳಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ವಸ್ತು ಪ್ರದರ್ಶನ ನಡೆಸಿಕೊಟ್ಟಿದ್ದರು. ಈ ಸಂಬಂಧ 1.98 ಲಕ್ಷ ಬಿಲ್ ಪಾವತಿಸುವಂತೆ ಕೋರಿ ಅರವಿಂದ್‌ಗೆ ಅರ್ಜಿ ಸಲ್ಲಿಸಿದ್ದರು.

ಬಿಲ್ ಹಣ ಪಾವತಿ ಮಾಡಲು 12 ಸಾವಿರ ಲಂಚ ನೀಡುವಂತೆ ಅರವಿಂದ್ ಒತ್ತಾಯಿಸಿದ್ದರು. ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ರಾಜಶೇಖರ್ ದೂರು ನೀಡಿದ್ದು ಬುಧವಾರ ಸಂಜೆ ಲಂಚದ ಹಣ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಸಿಕ್ಕಿ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎ.ವಿ. ಲಕ್ಷ್ಮಿನಾರಾಯಣ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿಗಳಾದ ಕೆ.ಎಂ. ಸಂತೋಷ್, ಎಂ. ಮಂಜುನಾಥ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಟಿ. ರಾಜು, ಬಿ. ಮೊಹಮ್ಮದ್ ಸಲೀಂ ತಂಡ ಕಾರ್ಯಾಚರಣೆ ನಡೆಸಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !