ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಭುಗಿಲೆದ್ದಿರುವ ಸಂಘರ್ಷದ ಹಿನ್ನೆಲೆಯಲ್ಲಿ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆದಿದ್ದು, ವಿವಿಧ ಗಂಭೀರ ವಿಚಾರಗಳ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ.
ಬಿಕ್ಕಟ್ಟಿನ ನಡುವೆಯೂ ಭಾರತ, ಹಾರ್ಮುಜ್ ಜಲಸಂಧಿಯ ಮೂಲಕ ನಾಲ್ಕು ತೈಲ ಹೇರಿಕೊಂಡಿರುವ ಹಡಗುಗಳು ಸುರಕ್ಷಿತವಾಗಿ ದೇಶಕ್ಕೆ ಕರೆಯಿಸಿಕೊಂಡಿದೆ. ದೇಶದಲ್ಲಿನ ಇಂಧನ ದಾಸ್ತಾನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ದೇಶ ಎದುರಿಸುತ್ತಿರುವ ಎಲ್‌ಪಿಜಿ ಸಮಸ್ಯೆಗೆ ಪರಿಹಾರವಾಗಿ ಎಲ್‌ಪಿಜಿಯ ದೇಶೀಯ ಉತ್ಪಾದನೆಯನ್ನು ಶೇ.28 ರಿಂದ ಶೇ.60ಕ್ಕೆ ಹೆಚ್ಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಐದು ತೈಲ ಟ್ಯಾಂಕರ್‌ಗಳು ಬರುವ ಸಾಧ್ಯತೆಗಳ ಕುರಿತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ , ಆರೋಗ್ಯ ಸಚಿವ ಜೆ ಪಿ ನಡ್ಡಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಕಾಂಗ್ರೆಸ್‌ನ ತಾರಿಕ್ ಅನ್ವರ್ ಮತ್ತು ಮುಕುಲ್ ವಾಸ್ನಿಕ್, ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್ ಮತ್ತು ಬಿಜು ಜನತಾದಳದ ಸಸ್ಮಿತ್ ಪಾತ್ರ ಭಾಗವಹಿಸಿದ್ದರು.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಿಜಿಜು, ಕೊಲ್ಲಿ ಯುದ್ಧ ಜಾಗತಿಕವಾಗಿ ಸಾಕಷ್ಟ ಸಮಸ್ಯೆ ಉಂಟುಮಾಡಿದ್ದರೂ, ದೇಶದಲ್ಲಿ ಯಾವುದೇ ರೀತಿಯ ಬಿಕ್ಕಟ್ಟು ಉಂಟಾಗದಂತೆ ಕೇಂದ್ರ ಸರಕಾರ ನೋಡಿಕೊಳ್ಳುತ್ತಿದೆ. ಸರಕಾರದ ಈ ಪ್ರಯತ್ನಗಳಿಗೆ ಪ್ರತಿಪಕ್ಷಗಳು ಬೆಂಬಲ ನಿಂತಿವೆ ಎಂದು ತಿಳಿಸಿದ್ದಾರೆ. ಬಿಕ್ಕಟ್ಟಿನ ಪರಿಸ್ಥಿತಿ ಸುಧಾರಿಸಲು ಕೇಂದ್ರ ಸರಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳಿಗೆ ತಮ್ಮ ಬೆಂಬಲ ಇದೆ ಎಂದು ವಿರೋಧ ಪಕ್ಷಗಳು ಹೇಳಿವೆ ಎಂದು ತಿಳಿಸಿದರು.



