ಹೊಸದಿಗಂಗ ಡಿಜಿಟಲ್ ಡೆಸ್ಕ್:
ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಅತ್ಯಂತ ಮಹತ್ವದ ಹಾಗೂ ಬೆಚ್ಚಿಬೀಳಿಸುವ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಮಂದಿರದ ಆವರಣದಲ್ಲಿರುವ ಯೋಗ ಕೇಂದ್ರದಲ್ಲಿ ತನಿಖೆ ನಡೆಸಿದ ಅಧಿಕಾರಿಗಳಿಗೆ ಅನಧಿಕೃತ ಕಾಣಿಕೆ ಹುಂಡಿಗಳು, ಬ್ಯಾಗ್‌ಗಳು ಮತ್ತು ನಕಲಿ ಕ್ಯೂಆರ್ ಕೋಡ್‌ಗಳು ಪತ್ತೆಯಾಗಿದ್ದು, ಭಕ್ತರ ಹಣವನ್ನು ಹೇಗೆ ಲೂಟಿ ಮಾಡಲಾಗುತ್ತಿತ್ತು ಎಂಬ ಸತ್ಯ ಬಯಲಾಗಿದೆ.
ಯೋಗ ಕೇಂದ್ರದಲ್ಲಿ ಸಿಕ್ಕ ಸಾಕ್ಷಿ
ಮಂದಿರದ ಯೋಗ ಕೇಂದ್ರದಲ್ಲಿ ಕಳ್ಳತನಕ್ಕೆ ಬಳಸುತ್ತಿದ್ದ ಅನಧಿಕೃತ ಕಾಣಿಕೆ ಪೆಟ್ಟಿಗೆಗಳು ಹಾಗೂ ಹಣ ಸಾಗಿಸುವ ಬ್ಯಾಗ್‌ಗಳನ್ನು ಎಸ್‌ಐಟಿ ವಶಪಡಿಸಿಕೊಂಡಿದೆ. ವಂಚಕರು ಅಧಿಕೃತ ಬ್ಯಾಂಕ್ ಖಾತೆಯ ಬದಲು ‘ರಾಮರಾಜ್ಯ ಕೋಶ್’ ಎಂಬ ನಕಲಿ ಹೆಸರಿನಲ್ಲಿ ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆದಿದ್ದರು. ಭಕ್ತರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ಹಣ ನೇರವಾಗಿ ಈ ನಕಲಿ ಖಾತೆಗೆ ಜಮೆಯಾಗುತ್ತಿತ್ತು.ಭಕ್ತರಿಗೆ ಯಾವುದೇ ಸಂಶಯ ಬಾರದಂತೆ ಮಂದಿರದ ದೇಣಿಗೆ ಪೆಟ್ಟಿಗೆಗಳ ಮೇಲೆಯೇ ವಂಚಕರು ಈ ನಕಲಿ ಕ್ಯೂಆರ್ ಕೋಡ್‌ಗಳನ್ನು ತಂದು ಅಂಟಿಸಿದ್ದರು.
ಇದನ್ನೂ ಓದಿ:
ಭಕ್ತರ ಭಕ್ತಿಯನ್ನೇ ಬಂಡವಾಳ ಮಾಡಿಕೊಂಡ ಖದೀಮರು!
ದೇಶ ವಿದೇಶಗಳಿಂದ ರಾಮಲಲ್ಲಾನ ದರ್ಶನಕ್ಕೆ ಬರುತ್ತಿದ್ದ ಲಕ್ಷಾಂತರ ಭಕ್ತರು ಮಂದಿರದ ಹುಂಡಿಗಳ ಮೇಲೆ ಅಂಟಿಸಲಾಗಿದ್ದ ಕ್ಯೂಆರ್ ಕೋಡ್‌ಗಳನ್ನು ನಿಜವಾದದ್ದೇ ಎಂದು ನಂಬಿ ಡಿಜಿಟಲ್ ಮೂಲಕ ಹಣ ಪಾವತಿಸುತ್ತಿದ್ದರು. ರಾಮಮಂದಿರ ಟ್ರಸ್ಟ್‌ಗೆ ಹೋಗಬೇಕಿದ್ದ ಕೋಟ್ಯಂತರ ರೂ. ದೇಣಿಗೆ ಹಣ ಈ ನಕಲಿ ‘ರಾಮರಾಜ್ಯ ಕೋಶ್’ ಖಾತೆಯ ಮೂಲಕ ವಂಚಕರ ಕೈ ಸೇರುತ್ತಿತ್ತು. ಸದ್ಯ ಎಸ್‌ಐಟಿ ಅಧಿಕಾರಿಗಳು ಈ ನಕಲಿ ಖಾತೆಯನ್ನು ಯಾರು ತೆರೆದಿದ್ದಾರೆ ಮತ್ತು ಇದರ ಹಿಂದೆ ಮಂದಿರದ ಒಳಗಿನ ಸಿಬ್ಬಂದಿಗಳ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.



