March 26, 2026
Thursday, March 26, 2026
spot_img

ಇಂಧನ ಭದ್ರತೆ ಟು ಪ್ರಜೆಗಳ ರಕ್ಷಣೆ: ಪಶ್ಚಿಮ ಏಷ್ಯಾ ಬಿಕ್ಕಟ್ಟು ಎದುರಿಸಲು ಮೋದಿ ಸರ್ಕಾರ ‘ಮಾಸ್ಟರ್ ಪ್ಲಾನ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿದಿದ್ದರೂ, ಭಾರತದ ಮೇಲೆ ಅದರ ಪರಿಣಾಮ ಬೀರದಂತೆ ಕೇಂದ್ರ ಸರ್ಕಾರವು ‘ಚಕ್ರವ್ಯೂಹ’ ರೂಪಿಸಿದೆ. ಹಾರ್ಮುಜ್ ಜಲಸಂಧಿ ಬಂದ್ ಆಗಿದ್ದರೂ, ದೇಶದ ಜನರಿಗೆ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಕೊರತೆಯಾಗದಂತೆ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ.

ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಸರ್ಕಾರ ಹದ್ದಿನ ಕಣ್ಣಿಟ್ಟಿದೆ.

ಸಾಕಷ್ಟು ಸ್ಟಾಕ್: ಎಲ್ಲ ತೈಲ ಸಂಸ್ಕರಣಾಗಾರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನದ ಕೊರತೆ ಇಲ್ಲ. ಸಾರ್ವಜನಿಕರು ‘Panic Buying’ (ಆತಂಕದ ಖರೀದಿ) ಮಾಡಬಾರದು ಎಂದು ಮನವಿ ಮಾಡಲಾಗಿದೆ.

LPG ಆದ್ಯತೆ: ಮನೆಬಳಕೆಯ ಸಿಲಿಂಡರ್ ವಿತರಣೆ ಎಂದಿನಂತೆ ಸಹಜವಾಗಿದೆ. ವಾಣಿಜ್ಯ ಬಳಕೆಯ ಎಲ್.ಪಿ.ಜಿ ಹಂಚಿಕೆಯನ್ನು ಶೇ. 50ಕ್ಕೆ ಏರಿಸಲಾಗಿದೆ.

PNG ಗೆ ಒತ್ತು: ಹೊಟೇಲ್, ಆಸ್ಪತ್ರೆ ಮತ್ತು ಮನೆಗಳಿಗೆ ಪೈಪ್ಡ್ ನೈಸರ್ಗಿಕ ಅನಿಲ ನೀಡಲು ತ್ವರಿತ ಗತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಹೊಸ ಸಂಪರ್ಕಗಳನ್ನು ಕೇವಲ 5 ರಿಂದ 10 ದಿನಗಳಲ್ಲಿ ನೀಡಲು ಸೂಚಿಸಲಾಗಿದೆ.

ಕಡಲ ಮಾರ್ಗ ಮತ್ತು ಭಾರತೀಯ ನಾವಿಕರ ಸುರಕ್ಷತೆ ಮೇಲೆ ವಿಶೇಷ ನಿಗಾ ವಹಿಸಲಾಗಿದೆ.

ನಾವಿಕರ ಕ್ಷೇಮ: ಸದ್ಯ ಪಶ್ಚಿಮ ಪರ್ಷಿಯನ್ ಕೊಲ್ಲಿಯಲ್ಲಿರುವ 20 ಭಾರತೀಯ ಹಡಗುಗಳು ಮತ್ತು ಅವುಗಳಲ್ಲಿರುವ 540 ನಾವಿಕರು ಸುರಕ್ಷಿತವಾಗಿದ್ದಾರೆ.

ನಿಯಂತ್ರಣ ಕೊಠಡಿ: ಡಿಜಿ ಶಿಪ್ಪಿಂಗ್ 24×7 ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೆ ಸಾವಿರಾರು ಕರೆ ಹಾಗೂ ಇಮೇಲ್‌ಗಳಿಗೆ ಸ್ಪಂದಿಸಿದೆ. ಈಗಾಗಲೇ 674 ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲಾಗಿದೆ.

ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯರ ನೆರವಿಗೆ ವಿದೇಶಾಂಗ ಸಚಿವಾಲಯ ಸನ್ನದ್ಧವಾಗಿದೆ.

ವಿಮಾನಯಾನ: ಯುಎಇ, ಸೌದಿ ಅರೇಬಿಯಾ ಮತ್ತು ಓಮನ್‌ನಿಂದ ಭಾರತಕ್ಕೆ ವಿಮಾನಗಳ ಸಂಚಾರ ಮುಂದುವರಿದಿದೆ. ಫೆಬ್ರವರಿ 28 ರಿಂದ ಈವರೆಗೆ ಸುಮಾರು 4.5 ಲಕ್ಷ ಪ್ರಯಾಣಿಕರು ಸುರಕ್ಷಿತವಾಗಿ ಮರಳಿದ್ದಾರೆ.

ಪರ್ಯಾಯ ಮಾರ್ಗ: ಇರಾನ್ ಮತ್ತು ಇಸ್ರೇಲ್‌ನಲ್ಲಿರುವವರಿಗೆ ಅರ್ಮೇನಿಯಾ, ಅಜೆರ್ಬೈಜಾನ್ ಮತ್ತು ಜೋರ್ಡಾನ್ ಮೂಲಕ ಪ್ರಯಾಣಿಸಲು ಅನುಕೂಲ ಮಾಡಿಕೊಡಲಾಗುತ್ತಿದೆ.

ದಾಸ್ತಾನು ಸಂಗ್ರಹಣೆ ಮತ್ತು ಕಪ್ಪು ಮಾರುಕಟ್ಟೆ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಸಮರ ಸಾರಿದೆ.

ದೇಶಾದ್ಯಂತ 2,600ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ, 450ಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುಳ್ಳು ಸುದ್ದಿ ಹರಡುವವರ ವಿರುದ್ಧ 680ಕ್ಕೂ ಹೆಚ್ಚು FIR ದಾಖಲಾಗಿದ್ದು, 195 ಜನರನ್ನು ಬಂಧಿಸಲಾಗಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ ಭಾರತವು ಈ ಜಾಗತಿಕ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದು, ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ಸಹಕರಿಸಿದರೆ ಪರಿಸ್ಥಿತಿಯನ್ನು ಸುಲಭವಾಗಿ ನಿಯಂತ್ರಿಸಬಹುದು ಎಂದು ಕೇಂದ್ರ ಸರ್ಕಾರವು ಸೂಚನೆ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !