ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ NEET-UG 2026 ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಯುವ ಜನಾಂಗವನ್ನು (Gen Z) ನೇರವಾಗಿ ತಲುಪುವ ಅವರ ಹೊಸ ಶೈಲಿಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಹಿಟ್ ಆಗಿದ್ದು, ಕೇವಲ ಕೆಲವೇ ದಿನಗಳಲ್ಲಿ ಅವರ ಖಾತೆಗೆ ಬರೋಬ್ಬರಿ 30 ರಿಂದ 40 ಲಕ್ಷ (3-4 ಮಿಲಿಯನ್) ಹೊಸ ಫಾಲೋವರ್ಸ್ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಅವರ ಒಟ್ಟು ಫಾಲೋವರ್ಸ್ ಸಂಖ್ಯೆ 10.5 ಕೋಟಿ (105 ಮಿಲಿಯನ್) ಗಡಿ ದಾಟಿದೆ.
ರಾತ್ರೋರಾತ್ರಿ ವೈರಲ್ ಆದ ‘Gen Z’ ಶೈಲಿಯ ಸೆಲ್ಫಿ ರೀಲ್
ಕಳೆದ ಗುರುವಾರ ತಡರಾತ್ರಿ 11:52 ಕ್ಕೆ ಪ್ರಧಾನಿ ಮೋದಿ ಅಪ್‌ಲೋಡ್ ಮಾಡಿದ್ದ ಸೆಲ್ಫಿ ವಿಡಿಯೋ ಈ ಭಾರಿ ಜಿಗಿತಕ್ಕೆ ಪ್ರಮುಖ ಕಾರಣವಾಗಿದೆ. ಸಾಮಾನ್ಯವಾಗಿ ಪ್ರಧಾನಿಯವರ ಖಾತೆಗಳಲ್ಲಿ ಪ್ರಕಟವಾಗುವ ಅಧಿಕೃತ ಹಾಗೂ ಎಡಿಟ್ ಮಾಡಿದ ವಿಡಿಯೋಗಳಿಗಿಂತ ಭಿನ್ನವಾಗಿ, ಮೋದಿ ತಮ್ಮ ಫ್ರಂಟ್ ಕ್ಯಾಮೆರಾವನ್ನು ಬಳಸಿ ಸಾಮಾನ್ಯ ಯುವಕರು ಮಾಡುವ ‘Gen Z’ ಶೈಲಿಯ ರೀಲ್ಸ್ ಮಾದರಿಯಲ್ಲಿ ಈ ವಿಡಿಯೋವನ್ನು ಸ್ವತಃ ಶೂಟ್ ಮಾಡಿದ್ದರು.
ಈ ವಿಡಿಯೋದಲ್ಲಿ ಪತ್ರಿಕೆ ಸೋರಿಕೆ ಕುರಿತು ವಿದ್ಯಾರ್ಥಿಗಳ ಪ್ರತಿಭಟನೆಯ ಬಗ್ಗೆ ನೇರವಾಗಿ ಮಾತನಾಡಿದ ಪ್ರಧಾನಿ, “ಈ ವಿಷಯವು ಯಾವುದೇ ರೀತಿಯಲ್ಲೂ ಸಾಮಾನ್ಯವಾದದ್ದಲ್ಲ. ಇದು ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ತೀವ್ರ ಕಷ್ಟ ಹಾಗೂ ಆತಂಕವನ್ನು ಉಂಟುಮಾಡಿದೆ” ಎಂದು ಹಿಂದಿಯಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೆ, ತಪ್ಪಿತಸ್ಥರನ್ನು ಈಗಾಗಲೇ ಬಂಧಿಸಲಾಗಿದ್ದು, ವಿದ್ಯಾರ್ಥಿಗಳ ಭವಿಷ್ಯ ವ್ಯರ್ಥವಾಗದಂತೆ ತಡೆಯಲು ಪರೀಕ್ಷೆಗಳನ್ನು ಶೀಘ್ರವಾಗಿ ನಡೆಸುವುದು ಅತ್ಯಗತ್ಯ ಎಂದು ಒತ್ತಿಹೇಳಿದ್ದರು.
ನಂದನ್ ನಿಲೇಕಣಿ ನೇತೃತ್ವದ ಟಾಸ್ಕ್ ಫೋರ್ಸ್ ಘೋಷಣೆ
ಇದರ ಬೆನ್ನಲ್ಲೇ ಭಾನುವಾರ ಮತ್ತೊಂದು ಅಧಿಕೃತ ರೀಲ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ದೇಶದ ಒಟ್ಟಾರೆ ಪರೀಕ್ಷಾ ವ್ಯವಸ್ಥೆಯಲ್ಲಿ ಸಂಪೂರ್ಣ ಸುಧಾರಣೆ ತರಲು ಮತ್ತು ಮೇಲ್ವಿಚಾರಣೆ ನಡೆಸಲು ಪ್ರಮುಖ ತಂತ್ರಜ್ಞಾನ ಉದ್ಯಮಿ ನಂದನ್ ನಿಲೇಕಣಿ ನೇತೃತ್ವದಲ್ಲಿ “ಹೈ-powered ಟಾಸ್ಕ್ ಫೋರ್ಸ್” ರಚಿಸಿರುವುದಾಗಿ ಪ್ರಕಟಿಸಿದ್ದಾರೆ.
ಇದನ್ನೂ ಓದಿ:
ಶಿಕ್ಷಣ ಸಚಿವರ ರಾಜೀನಾಮೆ, ಮುಂದುವರಿದ ಜಾಗತಿಕ ಕ್ರೇಜ್
ಪ್ರಧಾನಿ ಮೋದಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಂತರ ಜನರನ್ನು ತಲುಪಿದ ಹೊರತಾಗ್ಯೂ, ನವದೆಹಲಿಯ ಕೇಂದ್ರ ಭಾಗದಲ್ಲಿ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದ್ದರು. ಅಂತಿಮವಾಗಿ ಶನಿವಾರದಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಪ್ರತಿಭಟನಾಕಾರರ ಪ್ರಮುಖ ಬೇಡಿಕೆ ಈಡೇರಿದೆ.
ಏನೇ ಆದರೂ, ಇನ್‌ಸ್ಟಾಗ್ರಾಂ, ಎಕ್ಸ್ (ಟ್ವಿಟರ್) ಮತ್ತು ಫೇಸ್‌ಬುಕ್ ಸೇರಿದಂತೆ ವಿಶ್ವದ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಒಟ್ಟು ಕೋಟ್ಯಂತರ ಫಾಲೋವರ್ಸ್ ಹೊಂದುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಫಾಲೋವರ್ಸ್ ಹೊಂದಿರುವ ಪ್ರಭಾವಿ ಜಾಗತಿಕ ರಾಜಕೀಯ ನಾಯಕನಾಗಿ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ.



