March 27, 2026
Friday, March 27, 2026
spot_img

ಕೋಟೆನಾಡು ಚಿತ್ರದುರ್ಗದಲ್ಲಿ ಮೊಳಗಿದ ಶ್ರೀರಾಮ ಜಪ: ಶ್ರದ್ಧಾ ಭಕ್ತಿಯಿಂದ ನಡೆಯಿತು ವಿಶೇಷ ಪೂಜೆ

ಹೊಸದಿಗಂತ ವರದಿ,ಚಿತ್ರದುರ್ಗ:

ಕೋಟೆನಾಡು ಚಿತ್ರದುರ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ಶ್ರೀರಾಮ ಹಾಗೂ ಆಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ಶ್ರೀರಾಮ ನವಮಿ ಹಬ್ಬ ಆಚರಿಸಲಾಯಿತು.

ನಗರದ ಬುರುಜನಹಟ್ಟಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ರಾಮತಾರಕ ಹೋಮ ಹಾಗೂ ಗಣಪತಿ ಹೋಮ ಜರುಗಿತು. ಮಹಾಮಂಗಳಾರತಿ ನಂತರ ಪಾನಕ ಕೋಸಂಬರಿ ಪ್ರಸಾದ ವಿತರಿಸಲಾಯಿತು.

ಬುರುಜನಹಟ್ಟಿಯ ತಗ್ಗಿನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿನ ಶ್ರೀರಾಮನ ವಿಗ್ರಹ, ಆಂಜನೇಯಸ್ವಾಮಿ ಹಾಗೂ ವಿನಾಯಕ ಮೂರ್ತಿಗಳಿಗೆ ಮುಂಜಾನೆ ನಾನಾ ಅಭಿಷೇಕ ನೆರವೇರಿಸಿದ ಬಳಿಕ ಆಭರಣಗಳ ಜತೆಯಲ್ಲಿ ಗುಲಾಬಿ, ಸೇವಂತಿಗೆ, ಕನಕಾಂಬರ, ಮಲ್ಲಿಗೆ, ಪತ್ರೆ, ಕಲರ್ ಸೇವಂತಿಗೆ ಸೇರಿದಂತೆ ಬಗೆ ಬಗೆಯ ಪುಷ್ಪಗಳಿಂದ ನಯನ ಮನೋಹರವಾಗಿ ಸಿಂಗರಿಸಲಾಗಿತ್ತು.

ಇದಕ್ಕೂ ಮೊದಲು ಶ್ರೀರಾಮ, ಆಂಜನೇಯರ ಮೂರ್ತಿಗಳನ್ನು ಮೆರವಣಿಗೆ ಮೂಲಕ ಕರೆದೊಯ್ದು ಸಿಹಿನೀರು ಹೊಂಡದಲ್ಲಿ ಗಂಗಾ ಪೂಜೆ ನೆರವೇರಿಸಲಾಯಿತು. ಮಹಾಮಂಗಳಾರತಿ ನೆರವೇರಿಸಿದ ಬಳಿಕ ಭಕ್ತರಿಗೆ ಪಾನಕ, ಕೋಸಂಬರಿ ವಿನಿಯೋಗಿಸಲಾಯಿತು.

ರಂಗಯ್ಯನ ಬಾಗಿಲ ಬಳಿಯ ಶ್ರೀರಾಮ ದೇವಸ್ಥಾನ, ಧರ್ಮಶಾಲಾ ರಸ್ತೆಯಲ್ಲಿನ ಸೀತಾರಾಮ ಮಂದಿರ ಸೇರಿದಂತೆ ಇನ್ನಿತರೆ ನಾನಾ ಶ್ರೀರಾಮರ ದೇವಸ್ಥಾನಗಳಲ್ಲಿನ ಶ್ರೀರಾಮ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯ ಸ್ವಾಮಿ ಮೂರ್ತಿಗಳಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ನೇರವೇರಿಸಲಾಯಿತು.

ನಗರದ ತ್ಯಾಗರಾಜ ಬೀದಿಯಲ್ಲಿನ ಪುರಾತನ ಬಾಲರಾಮ ಮಂದಿರದಲ್ಲಿ ಶ್ರೀರಾಮೋತ್ಸವ ಶತಮಾನೋತ್ಸವ ಪ್ರಯುಕ್ತ ಶ್ರೀರಾಮ, ಸೀತಾದೇವಿ, ಲಕ್ಷ್ಮಣರ ವಿಗ್ರಹಗಳಿಗೆ ಹಾಗೂ ಆಂಜನೇಯ ಮೂರ್ತಿಗೆ ಬಗೆ ಬಗೆಯ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಸಮಿತಿಯಿಂದ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.

ನಗರದ ಮೆದೇಹಳ್ಳಿ ರಸ್ತೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿನ ಭೀಮಾಂಜನೇಯ ಸ್ವಾಮಿ ದೇವರಿಗೆ ಹಾಲಿನ ಅಭಿಷೇಕ, ಹೂವಿನ ಅಲಂಕಾರ, ಮಹಾ ಮಂಗಳಾರತಿ ನೆರವೇರಿಸಿದ ಬಳಿಕ ಭಕ್ತರಿಗೆ ಪಾನಕ ಕೋಸಂಬರಿ ವಿತರಿಸಲಾಯಿತು.

ಕೋಟೆಯೊಳಗಿನ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಆವರಣದಲ್ಲಿನ ಶ್ರೀ ಆಂಜನೇಯಸ್ವಾಮಿ, ಸಿಹಿ ನೀರು ಹೊಂಡದ ಬಳಿಯ ಆಂಜನೇಯಸ್ವಾಮಿ, ನಗರದ ಹೊಳಲ್ಕೆರೆ ರಸ್ತೆಯಲ್ಲಿನ ಪಿಎಚ್‌ಇ ಕಾಲನಿ ಬಳಿಯ ಪಂಚಮುಖಿ ಆಂಜನೇಯ ಸ್ವಾಮಿ ಸೇರಿದಂತೆ ನಾನಾ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಿಸಲಾಯಿತು.

ಶ್ರೀರಾಮ ನವಮಿ ಪ್ರಯುಕ್ತ ವಿವಿಧ ದೇವಾಲಯಗಳಲ್ಲಿ ಗರ್ಭಗುಡಿ ಹಾಗೂ ಉತ್ಸವ ಮೂರ್ತಿಗಳಿಗೆ ಅಭಿಷೇಕ ನೆರವೇರಿಸಿದ ಬಳಿಕ ಬಗೆ ಬಗೆಯ ಪುಷ್ಪಗಳಿಂದ ಮನಮೋಹಕವಾಗಿ ಅಲಂಕರಿಸಲಾಗಿತ್ತು. ಹಬ್ಬದ ಪ್ರಯುಕ್ತ ಬಹುತೇಕ ಎಲ್ಲಾ ದೇವಸ್ಥಾನಗಳಲ್ಲೂ ಇಡೀ ಆವರಣವನ್ನು ಬಾಳೆಕಂದು, ಮಾವಿನ ಸೊಪ್ಪು, ಹೂವುಗಳು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಕೆಲವು ದೇವಸ್ಥಾನಗಳಲ್ಲಿ ಮಹಾಮಂಗಳಾರತಿ ನೆರವೇರಿಸಿದ ಬಳಿಕ ಉತ್ಸವ ಮೂರ್ತಿಗಳ ಹಾಗೂ ಶ್ರೀರಾಮರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ನೆರೆದಿದ್ದ ಭಕ್ತರಿಗೆ ಪಾನಕ, ಕೋಸಂಬರಿ ವಿನಿಯೋಗಿಸಲಾಯಿತು. ಕೆಲವೆಡೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.

ಸಾರ್ವಜನಿಕರು ತಮ್ಮ ಮನೆಗಳಲ್ಲಿ ಮುಂಜಾನೆ ತಮ್ಮ ಮನೆ ದೇವರು, ಶ್ರೀರಾಮ, ಆಂಜನೇಯ ಸೇರಿದಂತೆ ಇತರೆ ದೇವರುಗಳಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಿಸಿ, ಪಾನಕ, ಕೋಸಂಬರಿ ಹಾಗೂ ಸಿಹಿ ಭಕ್ಷ್ಯ ಬೋಜನ ತಯಾರಿಸಿ ದೇವರಿಗೆ ಅರ್ಪಿಸಿ ಪೂಜೆ ನೆರವೇರಿಸಿದ ಬಳಿಕ ದೇವಸ್ಥಾನಗಳಿಗೆ ತೆರಳಿ ಹೂವು, ಹಣ್ಣು, ಕಾಯಿ ನೀಡಿ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !