ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಇಂಧನ ಪೂರೈಕೆಯ ಉಂಟಾಗಿರುವ ಅಡೆತಡೆಗಳು ಹಾಗೂ ಪ್ರಸುತ್ತ ಸ್ಥಿತಿಗತಿಗಳ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವರ್ಚುವಲ್ ಆಗಿ ಸಭೆ ನಡೆಸಿದ್ದು, ಆದರೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೈರಾಗಿದ್ದಾರೆ .
ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಸಿಎಂ ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದ್ದು, ಪ್ರಧಾನಿಗಳ ಜೊತೆಗಿನ ಸಭೆಯಿಂದ ದೂರ ಉಳಿಯುವ ಮೂಲಕ ರಾಜ್ಯದ ಜನತೆಗೆ ದ್ರೋಹ ಬಗೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿರುವವಿಜಯೇಂದ್ರ, ಇಂದು ಪ್ರಧಾನಿ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಹತ್ವದ ವಿಡಿಯೋ ಸಂವಾದ ಏರ್ಪಡಿಸಿ ಮಾತುಕತೆ ನಡೆಸಿದ್ದು, ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಸಂವಾದಕ್ಕೆ ಗೈರಾಗಿ ರಾಜ್ಯದ ಜನತೆಗೆ ದ್ರೋಹ ಬಗೆದಿದ್ದಾರೆ.
ವಿಧಾನಮಂಡಲದಲ್ಲಿ ಭಾಷಣ ಮಾಡುವ ವೇಳೆ ಹಾಗೂ ಮಾಧ್ಯಮಗಳ ಮುಂದೆ ಕೇಂದ್ರ ಸರಕಾರದ ವಿರುದ್ಧ ಪುಂಖಾನುಪುಂಖವಾಗಿ ಟೀಕೆ ಮಾಡುವ ಮುಖ್ಯಮಂತ್ರಿಗಳು ನಿಜವಾಗಿಯೂ ಜನಪರ ಕಾಳಜಿ ಇದ್ದರೆ ಪ್ರಧಾನಿಗಳ ಜತೆ ಸಂವಾದದಲ್ಲಿ ಭಾಗಿ ಆಗಬೇಕಿತ್ತು . ಯುದ್ಧದ ಸಂದರ್ಭದಲ್ಲಿ ಕರ್ನಾಟಕದ ಜನರಿಗೆ ತೊಂದರೆ ಆಗದಂತೆ ಯಾವ ರೀತಿ ಕ್ರಮ ಅನುಸರಿಸಬಹುದು ಎಂಬ ಸಲಹೆಗಳನ್ನೂ ನೀಡಬಹುದಿತ್ತು. ಅಲ್ಲದೇ ಕೇಂದ್ರ ಸರಕಾರ ಕೈಗೊಂಡಿರುವ ಕ್ರಮಗಳಿಗೆ ಪೂಕರವಾಗಿ ರಾಜ್ಯದಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬ ವಿಷಯದ ಕುರಿತು ಚರ್ಚೆ ಮಾಡಬಹುದಿತ್ತು. ಆದರೆ ಉತ್ತರಕುಮಾರನ ಪೌರುಷ ತೋರುವ ಮುಖ್ಯಮಂತ್ರಿಗಳು ಪ್ರಧಾನಿಗಳ ಜತೆ ಮುಖಾಮುಖಿ ಆಗದೇ ಸಂವಾದದಿಂದ ದೂರ ಉಳಿದಿರುವುದು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ಯೋಗ್ಯತೆಯನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಸಿದ್ದರಾಮಯ್ಯ ಅವರು ಏಳು ಕೋಟಿ ಕನ್ನಡಿಗರ ಪ್ರತಿನಿಧಿ ಎಂಬುದನ್ನು ಮರೆತು ಕೇವಲ ಕಾಂಗ್ರೆಸ್ ಕಚೇರಿ, ಸರಕಾರಿ ಬಂಗಲೆಗೆ ಸೀಮಿತ ಆಗಿರುವುದು ಕನ್ನಡಿಗರ ದುರಾದೃಷ್ಟ ಎಂದು ಬರೆದುಕೊಂಡಿದ್ದಾರೆ.



