June 4, 2026
Thursday, June 4, 2026
spot_img

ಬೆಳಗಾವಿಯಲ್ಲಿ ಮತ್ತೊಂದು ವಂಚನೆ ಜಾಲ ಪತ್ತೆ: ನೂರಾರು ಕೋಟಿ ರೂ. ಆನ್‌ಲೈನ್ ದಂಧೆ ಬಯಲು!

ಹೊಸದಿಗಂತ ಬೆಳಗಾವಿ:

ಕುಂದಾನಗರಿ ಬೆಳಗಾವಿಯಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಮತ್ತೊಂದು ಬೃಹತ್ ಆರ್ಥಿಕ ಹಗರಣ ಬೆಳಕಿಗೆ ಬಂದಿದೆ. ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಸಾವಿರಾರು ಕೋಟಿ ರೂಪಾಯಿ ವಂಚನೆ ಪ್ರಕರಣದ ತನಿಖೆ ಪ್ರಗತಿಯಲ್ಲಿರುವಾಗಲೇ, ನಗರದಲ್ಲಿ ಸದ್ದಿಲ್ಲದೆ ಕಾರ್ಯಾಚರಣೆ ನಡೆಸುತ್ತಿದ್ದ ಮತ್ತೊಂದು ಕಂಪನಿ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.

ನಗರದ ಭಾಗ್ಯ ನಗರದಲ್ಲಿರುವ ‘ಆದಿತ್ಯರಾಜ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್’ ಕಂಪನಿಯ ಕಚೇರಿ ಮೇಲೆ ಸಹಕಾರ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಎಸಿ ಶ್ರವಣ ನಾಯಕ ನೇತೃತ್ವದಲ್ಲಿ ನಡೆದ ಈ ಹಠಾತ್ ದಾಳಿಯಿಂದ ಕಂಗೆಟ್ಟ ಕಂಪನಿಯ ಆಡಳಿತ ಮಂಡಳಿ, ತಕ್ಷಣವೇ ತನ್ನ ಅಧಿಕೃತ ವೆಬ್‌ಸೈಟ್ ಅನ್ನು ಸ್ಥಗಿತಗೊಳಿಸಿ ಪರಾರಿಯಾಗಲು ಯತ್ನಿಸಿದೆ.

ಮಹಾರಾಷ್ಟ್ರ ಮೂಲದ ಕಿಂಗ್‌ಪಿನ್, 7 ಬ್ರಾಂಚ್‌ಗಳು!

ಮಹಾರಾಷ್ಟ್ರ ಮೂಲದ ಬಲರಾಮ್ ಮಾನೆ ಎಂಬಾತನೇ ಈ ಆದಿತ್ಯರಾಜ ಕ್ಯಾಪಿಟಲ್ ಕಂಪನಿಯ ಮುಖ್ಯ ಸೂತ್ರಧಾರ ಎನ್ನಲಾಗಿದೆ. ಈತ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 7 ಶಾಖೆಗಳನ್ನು ತೆರೆದು, ಕೋಟ್ಯಂತರ ರೂಪಾಯಿ ಹಣದ ದಂಧೆ ನಡೆಸುತ್ತಿದ್ದ ಗಂಭೀರ ಆರೋಪ ಕೇಳಿಬಂದಿದೆ. ಕಳೆದ 8 ವರ್ಷಗಳಿಂದ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಬೆಳಗಾವಿಯಲ್ಲಿ ಈ ಸಂಸ್ಥೆ ತನ್ನ ವ್ಯವಹಾರ ಜಾಲವನ್ನು ವಿಸ್ತರಿಸಿತ್ತು.

ದಾಳಿಯ ಸುಳಿವು ಸಿಗುತ್ತಿದ್ದಂತೆ ಸರ್ವರ್ ಡೌನ್!

ಅಧಿಕಾರಿಗಳು ದಾಳಿ ನಡೆಸುವ ಸುಳಿವು ಸಿಗುತ್ತಿದ್ದಂತೆಯೇ, ಕಂಪನಿಯು ತಾಂತ್ರಿಕ ನಿರ್ವಹಣೆಯ ನೆಪವೊಡ್ಡಿ ತನ್ನ ಸರ್ವರ್ ಅನ್ನು ಸಂಪೂರ್ಣವಾಗಿ ಡೌನ್ ಮಾಡಿದೆ. ಆದಾಗ್ಯೂ, ಅಧಿಕಾರಿಗಳ ಪ್ರಾಥಮಿಕ ತನಿಖೆ ವೇಳೆ ಆನ್‌ಲೈನ್ ಮೂಲಕ ನೂರಾರು ಕೋಟಿ ರೂಪಾಯಿಗಳ ಬೃಹತ್ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿದೆ.

1 ಲಕ್ಷಕ್ಕೆ 3 ಸಾವಿರ ರೂ. ಬಡ್ಡಿಯ ಆಮಿಷ!

ಸಾರ್ವಜನಿಕರನ್ನು ಸೆಳೆಯಲು ಈ ಕಂಪನಿಯು ಭರ್ಜರಿ ಆಮಿಷವೊಡ್ಡಿತ್ತು. ಕಂಪನಿಯಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು 3 ಸಾವಿರ ರೂಪಾಯಿಗಳ ಭಾರಿ ಬಡ್ಡಿ ನೀಡುವುದಾಗಿ ನಂಬಿಸಿತ್ತು. ಈ ಅತಿಯಾದ ಆಸೆಗೆ ಬಿದ್ದ ಬೆಳಗಾವಿ ಹಾಗೂ ಸುತ್ತಮುತ್ತಲಿನ ಸಾವಿರಾರು ಸಾರ್ವಜನಿಕರು ಕೋಟ್ಯಂತರ ರೂಪಾಯಿ ಹಣವನ್ನು ಇಲ್ಲಿ ಠೇವಣಿ ಇಟ್ಟಿದ್ದಾರೆ.

ಪ್ರಸ್ತುತ ಸ್ಥಿತಿ: ಸದ್ಯ ಕಚೇರಿಯಲ್ಲಿದ್ದ ಕಂಪ್ಯೂಟರ್, ಹಾರ್ಡ್ ಡಿಸ್ಕ್ ಹಾಗೂ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು, ಈ ಬೃಹತ್ ಹಣದ ಮೂಲ ಹಾಗೂ ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಆಳವಾದ ತನಿಖೆ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !