ಹೊಸದಿಗಂತ ವರದಿ ಬೀದರ್:
ಬೆಂಗಳೂರಿನ ಜರಕಾಬಂಡಿ ಕಾವಲ್ ಪ್ರದೇಶದಲ್ಲಿ ಭಾರತೀಯ ವಾಯುಸೇನೆಗೆ ನೀಡಲಾಗಿದ್ದ 452.5 ಎಕರೆ ಜಮೀನನ್ನು ರಾಜ್ಯ ಸರ್ಕಾರದ ಅರಣ್ಯ ಇಲಾಖೆ ವಾಪಸ್ ಪಡೆದಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ.
ಸಂರಕ್ಷಿತ ಅರಣ್ಯ ಪ್ರದೇಶವಾಗಿರುವ ಕಾರಣ ಈ ಭಾಗದಲ್ಲಿ ಸ್ಥಾಯಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಇಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಅರಣ್ಯ ಭೂಮಿ ಸಂರಕ್ಷಣೆ ಕಾಯ್ದೆಯ 64A ಕಲಂ ಅಡಿಯಲ್ಲಿ ಕ್ರಮ ಕೈಗೊಂಡು ಜಮೀನು ಹಿಂಪಡೆಯಲಾಗಿದೆ ಎಂದು ಸಚಿವರು ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ ಎಂಬ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ಈ ಬೆಳವಣಿಗೆಯ ನಡುವೆ ಬೀದರ್ ಸಮೀಪದ ಬೀದರ್–ಭಾಲ್ಕಿ ಮಾರ್ಗದ ಹೊನ್ನೆಕೇರಿ ಸಂರಕ್ಷಿತ ಅರಣ್ಯ ಪ್ರದೇಶದ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಸ್ಥಳೀಯರ ಪ್ರಕಾರ, ಇಲ್ಲಿ ಸುಮಾರು 1777.25 ಎಕರೆ ಅರಣ್ಯ ಭೂಮಿ ಅಕ್ರಮವಾಗಿ ನಕಲಿ ದಾಖಲೆಗಳ ಮೂಲಕ ವಶಪಡಿಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ:
ಇದೇ ಪ್ರದೇಶದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ ಎಂಬ ದೂರು ಕೇಳಿಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಲ್ಲದೆ, ಈ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮತ್ತು ಇತರ ಚಟುವಟಿಕೆಗಳ ಕುರಿತು ಸ್ಥಳೀಯರು ಪ್ರಶ್ನೆ ಎತ್ತಿದ್ದಾರೆ. ತಮ್ಮ ಸ್ವಕ್ಷೇತ್ರದಲ್ಲಿನ ಅರಣ್ಯ ಭೂಮಿ ಅತಿಕ್ರಮಣದ ವಿರುದ್ಧ ಮೊದಲು ಕ್ರಮ ಕೈಗೊಳ್ಳಬೇಕು, ನಂತರ ವಾಯುಸೇನೆಗೆ ನೀಡಿದ ಜಮೀನು ವಿಚಾರ ನೋಡಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.
ರಘುವೀರ ಪಾಟೀಲ್, ಶಿವರಾಜ್ ಪಾಟೀಲ್ ಅತಿವಾಳ, ವಿ.ಕೆ. ದೇಶಪಾಂಡೆ ಸೇರಿದಂತೆ ಹಲವು ರೈತ ನಾಯಕರು ಸಚಿವರ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಹೊಸ ದಿಗಂತಕ್ಕೆ ಪ್ರತಿಕ್ರಿಯಿಸಿದರು.



