March 30, 2026
Monday, March 30, 2026
spot_img

CINE | ಅನುಷ್ಕಾ ಫ್ಯಾನ್ಸ್‌ಗೆ ಡಬಲ್ ಧಮಾಕಾ: ಬರ್ತಿದೆ 90 ಕೋಟಿಯ ಬಿಗ್ ಬಜೆಟ್ ‘ಕಥನಾರ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾಗಳ ಆಯ್ಕೆಯಲ್ಲಿ ಅತಿ ಹೆಚ್ಚು ಜಾಗರೂಕತೆ ವಹಿಸುವ ನಟಿ ಅನುಷ್ಕಾ ಶೆಟ್ಟಿ, ಸದ್ಯ ತಮ್ಮ ವೈಯಕ್ತಿಕ ಜೀವನದ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಅವರ ಮದುವೆ ಬಗ್ಗೆ ಅಂತೆ-ಕಂತೆಗಳು ಹರಿದಾಡುತ್ತಿರುವ ಬೆನ್ನಲ್ಲೇ, ಅಭಿಮಾನಿಗಳಿಗೆ ಅವರ ಕಡೆಯಿಂದ ಒಂದು ಅಧಿಕೃತ ‘ಸಿಹಿ ಸುದ್ದಿ’ ಸಿಕ್ಕಿದೆ. ಆದರೆ ಇದು ಮದುವೆ ಬಗ್ಗೆಯಲ್ಲ, ಬದಲಾಗಿ ಅವರ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಕಥನಾರ್: ದಿ ವೈಲ್ಡ್ ಸೋರ್ಸೆರರ್’ ಬಗ್ಗೆ.

ಟಾಲಿವುಡ್ ಮತ್ತು ಕೋಲಿವುಡ್ ಆಳಿದ ಅನುಷ್ಕಾ, ಇದೇ ಮೊದಲ ಬಾರಿಗೆ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಹೈ-ಬಜೆಟ್ ಫ್ಯಾಂಟಸಿ ಸಿನಿಮಾದಲ್ಲಿ ಅವರು ‘ನೀಲಿ’ ಎಂಬ ನಿಗೂಢ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಸಾಮಾನ್ಯವಾಗಿ ಸಿನಿಮಾಗಳ ಟ್ರೇಲರ್ ಬೆಳಗ್ಗೆ ಅಥವಾ ಸಂಜೆ ರಿಲೀಸ್ ಆಗುತ್ತವೆ. ಆದರೆ ‘ಕಥನಾರ್’ ತಂಡ ಹೊಸ ಹಾದಿ ಹಿಡಿದಿದೆ. ಮಾರ್ಚ್ 31ರ ಮಧ್ಯಾಹ್ನ ಸರಿಯಾಗಿ 1:31ಕ್ಕೆ ಟ್ರೇಲರ್ ಅನಾವರಣಗೊಳ್ಳಲಿದೆ. ಈ 1:31ರ ಹಿಂದಿನ ರಹಸ್ಯವೇನು ಎಂಬುದು ಸದ್ಯ ಸಿನಿಮಾ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದೆ.

ಮಲಯಾಳಂ ನಟ ಜಯಸೂರ್ಯ ಮುಖ್ಯ ಭೂಮಿಕೆಯಲ್ಲಿದ್ದರೆ, ಸೂಪರ್ ಸ್ಟಾರ್ ಮೋಹನ್ ಲಾಲ್ ಹಾಗೂ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ವಿಶೇಷ ಅತಿಥಿ ಪಾತ್ರಗಳಲ್ಲಿ ಮಿಂಚಲಿದ್ದಾರೆ.

ಈ ಚಿತ್ರವು ಕೇವಲ ಮಲಯಾಳಂ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಟ್ರೇಲರ್ ಜೊತೆಗೆ ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗುವ ಸಾಧ್ಯತೆಯಿದ್ದು, ಅನುಷ್ಕಾ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !