ಹೊಸದಿಗಂತ ಡಿಜಿಟಲ್ ಡೆಸ್ಕ್:
ಡೀಸೆಲ್ ಟ್ಯಾಂಕರ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ ಘಟನೆ ಹಾಸನ ನಗರದ ಎಂ.ಜಿ ರಸ್ತೆಯಲ್ಲಿ ಇಂದು ಮುಂಜಾನೆ ನಡೆದಿದೆ. ಡಿಕ್ಕಿಯ ತೀವ್ರತೆಗೆ ಟ್ಯಾಂಕರ್‌ನಿಂದ ಸ್ವಲ್ಪ ಪ್ರಮಾಣದಲ್ಲಿ ಡೀಸೆಲ್ ಸೋರಿಕೆಯಾಗಿದ್ದು, ಕೆಲಕಾಲ ಸ್ಥಳದಲ್ಲಿ ಉದ್ವಿಗ್ನತೆ ಮನೆಮಾಡಿತ್ತು.
ಅಪಘಾತದ ರಭಸಕ್ಕೆ ಕಾರಿನ ಒಂದು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರು ರಸ್ತೆಯ ಮತ್ತೊಂದು ಬದಿಗೆ ಎಸೆಯಲ್ಪಟ್ಟಿದೆ. ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:
ಡೀಸೆಲ್ ಸೋರಿಕೆ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಆತಂಕಗೊಂಡಿದ್ದು, ಯಾವುದೇ ಕ್ಷಣದಲ್ಲಿ ಬೆಂಕಿ ಅನಾಹುತ ಸಂಭವಿಸುವ ಭೀತಿ ಎದುರಾಯಿತು. ಆದರೆ ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.
ಘಟನೆಯ ಮಾಹಿತಿ ಪಡೆದ ನಗರ ಸಂಚಾರ ಪೊಲೀಸರು ಸಹ ಸ್ಥಳಕ್ಕೆ ಧಾವಿಸಿ ವಾಹನ ಸಂಚಾರವನ್ನು ಕೆಲಕಾಲ ನಿಯಂತ್ರಿಸಿದರು. ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸಿ ರಸ್ತೆಯನ್ನು ಸುರಕ್ಷಿತಗೊಳಿಸಿದರು. ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವಾಹನಗಳ ವೇಗ ಹಾಗೂ ಚಾಲಕರ ನಿರ್ಲಕ್ಷ್ಯವೇ ಕಾರಣವಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.



