ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಹಿರಿಯ ಸಹೋದರ ಮೊಹಮ್ಮದ್ ತಾಹಿರ್ ಅನ್ವರ್ ಪಾಕಿಸ್ತಾನದ ಬಹಾವಲ್ಪುರದಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಸುದ್ದಿ ಹೊರಬಿದ್ದಿದೆ.
ಸಾವಿನ ನಿಖರ ಕಾರಣವನ್ನು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸದಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಜೈಶ್‌ಗೆ ಸಂಬಂಧಿಸಿದ ಮೂಲಗಳ ಪ್ರಕಾರ, ಅನ್ವರ್ ಅಂತ್ಯಕ್ರಿಯೆಯನ್ನು ಸೋಮವಾರ ರಾತ್ರಿ ಬಹಾವಲ್ಪುರದ ಜಾಮಿಯಾ ಮಸೀದಿ ಉಸ್ಮಾನ್ ವಾಲಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸ್ಥಳೀಯ ಮಟ್ಟದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ:
ಅನ್ವರ್, ಮಸೂದ್ ಅಜರ್ ಅವರ ಐವರು ಸಹೋದರರಲ್ಲಿ ಒಬ್ಬರಾಗಿದ್ದು, ಜೈಶ್-ಎ-ಮೊಹಮ್ಮದ್ ಸಂಘಟನೆಯ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದ ಎನ್ನಲಾಗಿದೆ. ಕಳೆದ ವರ್ಷ ಭಾರತ ನಡೆಸಿದ ಆಪರೇಷನ್ ಸಿಂಧೂರ ದಾಳಿಯ ವೇಳೆ ಬಹಾವಲ್ಪುರದಲ್ಲಿದ್ದ ಜೈಶ್ ಕೇಂದ್ರ ಗುರಿಯಾಗಿದ್ದು, ಮಸೂದ್ ಅಜರ್ ತನ್ನ ಕುಟುಂಬದ 10 ಮಂದಿ ಹಾಗೂ ನಾಲ್ವರು ಸಹಾಯಕರನ್ನು ಕಳೆದುಕೊಂಡಿದ್ದಾಗಿ ಹೇಳಿಕೊಂಡಿದ್ದನು.
ಈ ಹೊಸ ಬೆಳವಣಿಗೆ ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆಗಳ ಒಳಚಟುವಟಿಕೆಗಳ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಸಾವಿನ ಹಿಂದೆ ನೈಸರ್ಗಿಕ ಕಾರಣವೇ ಅಥವಾ ಬೇರೆ ಯಾವುದೇ ಸಂಶಯಾಸ್ಪದ ಅಂಶವಿದೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಬಂದಿಲ್ಲ.
ಬಾಹ್ಯ ಕಾರಣಗಳ ಬಗ್ಗೆ ಅಧಿಕೃತ ದೃಢೀಕರಣ ಸಿಗದಿದ್ದರೂ, ಈ ಸುದ್ದಿ ಪ್ರಾದೇಶಿಕ ಭದ್ರತಾ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.



