July 11, 2026
Saturday, July 11, 2026
spot_img

ಚಿತ್ರದುರ್ಗದ ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗೆ ಹೊಸ ಕ್ರಿಯಾಯೋಜನೆ: ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಆದೇಶ!

ಹೊಸದಿಗಂತ ವರದಿ ಚಿತ್ರದುರ್ಗ

ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಲ್ಲಿ ಕುಡಿಯುವ ನೀರು, ಸ್ನಾನ ಹಾಗೂ ಶೌಚಾಲಯ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರವಾಸಿ ತಾಣಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಡಿ.ಎಂ.ಎಫ್ (ಜಿಲ್ಲಾ ಖನಿಜ ಪ್ರತಿಷ್ಟಾನ ನಿಧಿ) ಅಡಿ ಅನುದಾನ ಒದಗಿಸಲಾಗುವುದು. ಶೀಘ್ರವೇ ವಿಸ್ತೃತವಾದ ಯೋಜನಾ ವರದಿಯನ್ನು ಸಿದ್ದಪಡಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ.ಟಿ.ವೆಂಕಟೇಶ್ ಹೇಳಿದರು.

 ಯಾತ್ರಿ ನಿವಾಸ ಕಟ್ಟಡಗಳ ಹಸ್ತಾಂತರಕ್ಕೆ ಸೂಚನೆ:

ಹೊಳಲ್ಕೆರೆ ತಾಲ್ಲೂಕಿನ ಹೊರಕೆದೇವರಪುರ ಗ್ರಾಮದ ಶ್ರೀ.ಲಕ್ಷ್ಮೀ ನರಸಿಂಹ ದೇವಸ್ಥಾನ ಹಾಗೂ ಸಾಸಲು ಭೂತಪ್ಪನ ದೇವಸ್ಥಾನದ ಬಳಿ ನಿರ್ಮಿಸಲಾಗಿರುವ ಯಾತ್ರಿ ನಿವಾಸ ಕಟ್ಟಡಗಳನ್ನು ನಿರ್ವಹಣೆಗಾಗಿ ಅರ್ಹ ಸಂಸ್ಥೆಗಳಿಗೆ ಹಸ್ತಾಂತರಕ್ಕೆ ಜಿಲ್ಲಾಧಿಕಾರಿ ಸೂಚಿಸಿದರು.

ಹಿರಿಯೂರು ತಾಲ್ಲೂಕಿನ ವಿ.ವಿ.ಸಾಗರ ಮಾರಿಕಾಂಬ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಿರುವ 10 ವಾಣಿಜ್ಯ ಮಳಿಗೆ, ಪಾರ್ಕ್, ಸಾರ್ವಜನಿಕ ಶೌಚಾಲಯ ಮತ್ತು ಕಿಚರ್ ಕಟ್ಟವನ್ನು ಶ್ರೀ ಕಣಿವೆ ಮಾರಮ್ಮ ದೇವಿ ದೇವಸ್ಥಾನ ಸಮಿತಿ ಹಸ್ತಾಂತರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ವಿ.ವಿ.ಸಾಗರ ಹಾಗೂ ಚಂದ್ರವಳ್ಳಿಯಲ್ಲಿ ಜಲ ಕ್ರೀಡೆಗಳು ಹಾಗೂ ಪ್ರವಾಸೋದ್ಯಮಕ್ಕೆ ಇಂಬು ನೀಡುವ ನಿಟ್ಟಿನಲ್ಲಿ ಜಿಲ್ಲಾ ಪ್ರವಾಸೋದ್ಯಮ ನೀತಿಯಲ್ಲಿ ಯೋಜನೆ ರೂಪಿಸಲಾಗಿದೆ. ಈಗಾಗಲೇ ವಿ.ವಿ.ಸಾಗರ ಹಿನ್ನೀರಿನಲ್ಲಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ ಜಲ ಕ್ರೀಡೆಗಳಾದ ಕಯಾಕಿಂಗ್, ರಾಫ್ಟಿಂಗ್, ಬೋಟಿಂಗ್ ನಡೆಸಲಾಗುತ್ತದೆ. ಇದಕ್ಕೆ ಕ್ರಮಬದ್ದವಾಗಿ ಅನುಮತಿ ನೀಡಲಾಗಿದೆಯೇ, ಸರಿಯಾದ ಪರಿಶೀಲನೆ ನಡೆಸಿ ಜಲಕ್ರೀಡೆಗಳನ್ನು ಆಯೋಜಿಸಲಾಗುತ್ತುದೆಯೇ ಎಂಬುದನ್ನು ಖಚಿತಪಡಿಕೊಳ್ಳಲು ಪರಿಶೀಲನಾ ಸಮಿತಿ ರಚಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಇದನ್ನೂ ಓದಿ:

 ಶಾಸಕರ ಅನುದಾನದಲ್ಲಿ ದವಳಪ್ಪನ ಬೆಟ್ಟ ಅಭಿವೃದ್ಧಿ :

ಚಂದ್ರವಳ್ಳಿ ಪ್ರದೇಶದಲ್ಲಿರುವ ಐತಿಹಾಸಿಕ ದವಳಪ್ಪನ ಬೆಟ್ಟವನ್ನು ಅಭಿವೃದ್ಧಿ ಪಡಿಸಲು ಸ್ಥಳೀಯ ಶಾಸಕರು ಅನುದಾನ ನೀಡುವುದಾಗಿ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ದವಳಪ್ಪನ ಬೆಟ್ಟ ಅಭಿವೃದ್ಧಿ ಶೀಘ್ರವೇ ಯೋಜನೆ ರೂಪಿಸಬೇಕು. ರಾಜ್ಯ ಪುರತತ್ವ ಇಲಾಖೆ ವತಿಯಿಂದ ಕೋಟೆ ಸಮೀಪವಿರುವ ಫಿಲ್ಟರ್ ಹೌಸ್ ಬಳಿ ರೂ.10 ಕೋಟಿಯಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸುವ ಪ್ರಸ್ತಾವನೆಯನ್ನು ಸಲ್ಲಿಸಲು ಜಿಲ್ಲಾಧಿಕಾರಿ ನಿರ್ದೇಶಿಸಿದರು.

 ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ, ಪುರತತ್ವ ಇಲಾಖೆಯ ಪಿ.ಸುದೀರ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಬಿ.ಎಸ್.ಹರೀಶ್ ಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !