ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಡುವೆ ಭಾರತೀಯ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಚುನಾವಣಾ ರಾಜಕೀಯ ಮತ್ತಷ್ಟು ರಂಗೇರಿದೆ.
ಕೇಂದ್ರ ಸಚಿವರಾದ ಕಿರಣ್ ರಿಜಿಜು ಮತ್ತು ಸುಕಾಂತ ಮಜುಂದಾರ್ ಅವರ ಸಮ್ಮುಖದಲ್ಲಿ ಪೇಸ್ ಪಕ್ಷದ ಧ್ವಜ ಸ್ವೀಕರಿಸಿದರು. ಬಿಜೆಪಿ ನಾಯಕತ್ವವು ಈ ಸೇರ್ಪಡೆಯನ್ನು ಮಹತ್ವದ ರಾಜಕೀಯ ಬೆಳವಣಿಗೆಯಾಗಿ ನೋಡುತ್ತಿದ್ದು, ಕ್ರೀಡಾ ಕ್ಷೇತ್ರದ ಜನಪ್ರಿಯ ಮುಖವನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನವೆಂದು ವಿಶ್ಲೇಷಿಸಲಾಗಿದೆ.
ಇದನ್ನೂ ಓದಿ:
ಕಳೆದ ಕೆಲವು ದಿನಗಳ ಹಿಂದಷ್ಟೇ ಕೋಲ್ಕತ್ತಾದಲ್ಲಿ ಬಿಜೆಪಿ ರಾಜ್ಯ ನಾಯಕರನ್ನು ಭೇಟಿ ಮಾಡಿದ್ದ ಪೇಸ್ ಅವರ ರಾಜಕೀಯ ಪ್ರವೇಶದ ಬಗ್ಗೆ ಊಹಾಪೋಹಗಳು ಕೇಳಿಬಂದಿದ್ದವು. ಇಂದು ಅದಕ್ಕೆ ಅಧಿಕೃತ ಮುದ್ರೆ ಬಿದ್ದಂತಾಗಿದೆ.
ಗಮನಾರ್ಹ ಸಂಗತಿ ಎಂದರೆ, ಪೇಸ್ ರಾಜಕೀಯಕ್ಕೆ ಹೊಸ ಮುಖವಲ್ಲ. ಈ ಹಿಂದೆ ಅವರು 2021ರಲ್ಲಿ ತೃಣಮೂಲ ಕಾಂಗ್ರೆಸ್ ಜೊತೆಗೆ ಕೈಜೋಡಿಸಿದ್ದರು ಹಾಗೂ ಗೋವಾ ಚುನಾವಣೆಯ ವೇಳೆ ಪಕ್ಷದ ಪರವಾಗಿ ಪ್ರಚಾರ ಕೂಡ ನಡೆಸಿದ್ದರು.
ಇದೀಗ ಮುಂಬರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಅವರು ನೇರವಾಗಿ ಕಣಕ್ಕಿಳಿಯುತ್ತಾರೆಯೇ ಎಂಬ ಕುತೂಹಲ ಹೆಚ್ಚಾಗಿದೆ. ಬಿಜೆಪಿ ನಾಯಕರ ಪ್ರಕಾರ, ಪೇಸ್ ಅವರ ಸೇರ್ಪಡೆ ಪಕ್ಷಕ್ಕೆ ಹೆಚ್ಚುವರಿ ಬಲ ನೀಡಲಿದೆ.



