April 1, 2026
Wednesday, April 1, 2026
spot_img

ಈ 9 ಜಿಲ್ಲೆಗಳ ಕಚೇರಿ ಮಧ್ಯಾಹ್ನವೇ ಕ್ಲೋಸ್‌:‌ ಅತೀ ಬಿಸಿಲಿಗೆ ಹೊಸ ಪ್ಲಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬೇಸಿಗೆಯ ಬಿಸಿಲಿನ ತಾಪಮಾನ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದಾಗಿ ಸರ್ಕಾರಿ ನೌಕರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು 9 ಜಿಲ್ಲೆಗಳ ಕಚೇರಿ ಕೆಲಸದ ವೇಳಾಪಟ್ಟಿಯನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.

ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಹಾಗೂ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಅಂದರೆ, ಕಲಬುರಗಿ, ಬೀದರ್ , ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಈ ಹೊಸ ವೇಳಾಪಟ್ಟಿ ಜಾರಿಯಲ್ಲಿರಲಿದೆ.

2026ರ ಏಪ್ರಿಲ್ ಮತ್ತು ಮೇ ತಿಂಗಳುಗಳವರೆಗೆ ಮಾತ್ರ ಈ ಸಮಯ ಬದಲಾವಣೆ ಇರಲಿದೆ. ಬೆಳಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 1:30 ಗಂಟೆಯವರೆಗೆ ಮಾತ್ರ ಕಚೇರಿ ತೆಗೆದಿರಲಿದೆ.

ಬೇಸಿಗೆಯ ತೀವ್ರ ಬಿಸಿಲಿನಿಂದಾಗಿ ನೌಕರರು ಕರ್ತವ್ಯ ನಿರ್ವಹಿಸಲು ಎದುರಿಸುತ್ತಿರುವ ತೊಂದರೆಗಳನ್ನು ಮನಗಂಡು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ವಿವಿಧ ನೌಕರರ ಒಕ್ಕೂಟಗಳು ಸರ್ಕಾರದ ಮುಂದೆ ಮನವಿ ಸಲ್ಲಿಸಿದ್ದವು. ಈ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು, ಮಾನವೀಯ ದೃಷ್ಟಿಯಿಂದ ಕೆಲಸದ ಅವಧಿಯನ್ನು ಬದಲಾಯಿಸಿದೆ.

ಕಚೇರಿ ಅವಧಿ ಬದಲಾದ ಸಮಯದಲ್ಲೂ ಸಾರ್ವಜನಿಕರಿಗೆ ಯಾವುದೇ ಲೋಪ ಅಥವಾ ಅಡಚಣೆಯಾಗದಂತೆ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಲಾಗಿದೆ. ಜತೆಗೆ ಎಮರ್ಜೆನ್ಸಿ ಇದ್ದಾಗ ಬಂದು ಕೆಲಸ ಮಾಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !