April 2, 2026
Thursday, April 2, 2026
spot_img

IPL | ಸಮೀರ್ ರಿಜ್ವಿ ಬ್ಯಾಟಿಂಗ್ ಬಲ: ಡೆಲ್ಲಿ ವಿರುದ್ಧ ಮಂಡಿಯೂರಿದ ಲಕ್ನೋ ಸೂಪರ್ ಜೈಂಟ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಕ್ನೋದಲ್ಲಿ ನಡೆದ ಐಪಿಎಲ್ 2026ರ ಐದನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ, ಡೆಲ್ಲಿ ಬೌಲರ್‌ಗಳ ಕಟ್ಟು ನಿಟ್ಟಿನ ದಾಳಿಗೆ ತತ್ತರಿಸಿ 18.4 ಓವರ್‌ಗಳಲ್ಲಿ 141 ರನ್‌ಗಳಿಗೆ ಆಲೌಟ್ ಆಯಿತು.

ಲಕ್ನೋ ಪರ ಅಬ್ದುಲ್ ಸಮದ್ 36 ರನ್ ಹಾಗೂ ಮಿಚೆಲ್ ಮಾರ್ಷ್ 35 ರನ್ ಗಳಿಸಿ ಹೋರಾಟ ನಡೆಸಿದರೂ, ಇತರ ಬ್ಯಾಟ್ಸ್‌ಮನ್‌ಗಳಿಂದ ಹೆಚ್ಚಿನ ನೆರವು ಸಿಗಲಿಲ್ಲ. ಡೆಲ್ಲಿ ಪರ ಲುಂಗಿ ಎನ್‌ಗಿಡಿ ಮತ್ತು ಟಿ ನಟರಾಜನ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರು. ಕುಲ್ದೀಪ್ ಯಾದವ್ ಎರಡು ವಿಕೆಟ್ ಕಬಳಿಸಿ ಲಕ್ನೋ ದೊಡ್ಡ ಮೊತ್ತ ಕಟ್ಟುವುದನ್ನು ತಡೆದರು.

ಇದನ್ನೂ ಓದಿ:

142 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಮೊದಲ ಎಸೆತದಲ್ಲೇ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡ ಡೆಲ್ಲಿ, 26 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಕಣಕ್ಕಿಳಿದ ಯುವ ಬ್ಯಾಟ್ಸ್‌ಮನ್ ಸಮೀರ್ ರಿಜ್ವಿ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು.

ಇಂಪ್ಯಾಕ್ಟ್ ಆಟಗಾರನಾಗಿ ಬಂದ ರಿಜ್ವಿ 47 ಎಸೆತಗಳಲ್ಲಿ ಅಜೇಯ 70 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಟ್ರಿಸ್ಟನ್ ಸ್ಟಬ್ಸ್ ಜೊತೆ ಐದನೇ ವಿಕೆಟ್‌ಗೆ 119 ರನ್‌ಗಳ ಅಮೋಘ ಜೊತೆಯಾಟ ಕಟ್ಟಿದ ಅವರು, ಡೆಲ್ಲಿ ತಂಡವನ್ನು 17.1 ಓವರ್‌ಗಳಲ್ಲಿ ಗೆಲುವಿನತ್ತ ಮುನ್ನಡೆಸಿದರು. ಈ ಸೋಲಿನಿಂದ ಲಕ್ನೋ ಈ ಆವೃತ್ತಿಯಲ್ಲಿ ತವರಿನಲ್ಲಿ ಸೋತ ಮೊದಲ ತಂಡವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !