ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ದುಬಾರಿ ಪಬ್ ಸಂಸ್ಕೃತಿ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇಂದಿರಾನಗರದ ಜನಪ್ರಿಯ ಪಬ್ನಲ್ಲಿ ಗ್ರಾಹಕರೊಬ್ಬರಿಗೆ ₹150 ಬೆಲೆಯ ಸ್ಟಾರ್ಟರ್ ಹೆಸರಿನಲ್ಲಿ ಸಾಮಾನ್ಯ ಫ್ರೈಯಮ್ಸ್ ನೀಡಲಾಗಿದೆ ಎಂಬ ಆರೋಪ ವೈರಲ್ ಆಗಿದೆ. ಈ ಕುರಿತು ಎಕ್ಸ್ನಲ್ಲಿ ಹಂಚಿಕೊಂಡ ಪೋಸ್ಟ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಅರುಣ್ರಾಜ್ ಪತ್ತಾರ್ ಎಂಬ ಬಳಕೆದಾರರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಮೆನುನಲ್ಲಿ “ಚಿಲ್ಲಿ ಡಸ್ಟೆಡ್ ಗೋಲ್ಡ್ ಫಿಂಗರ್ಸ್” ಎಂಬ ಹೆಸರಿನಲ್ಲಿ ಆರ್ಡರ್ ಮಾಡಿದ ತಿನಿಸಿಗೆ ಸಾಮಾನ್ಯವಾಗಿ ಅಂಗಡಿಗಳಲ್ಲಿ ಅಗ್ಗದ ದರಕ್ಕೆ ಸಿಗುವ ಫ್ರೈಯಮ್ಸ್(ಬೋಟಿ ) ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೆನು ಚಿತ್ರ ಮತ್ತು ಸರ್ವ್ ಮಾಡಿದ ತಿನಿಸಿನ ಫೋಟೋವನ್ನು ಹಂಚಿಕೊಂಡಿರುವ ಅವರು, ₹150ಕ್ಕೆ ಇಂತಹ ಖಾದ್ಯ ನೀಡಿರುವುದು ಅಚ್ಚರಿಯಾಗಿದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಹಲವರು ತಮ್ಮದೇ ಅನುಭವಗಳನ್ನು ಹಂಚಿಕೊಂಡಿದ್ದಾರೆ. ದುಬಾರಿ ಪಬ್ಗಳಲ್ಲಿ ಸರಳ ತಿನಿಸುಗಳಿಗೆ ಅತಿಯಾದ ಬೆಲೆ ನಿಗದಿ ಮಾಡಲಾಗುತ್ತಿದೆ ಎಂದು ಅನೇಕರು ಟೀಕಿಸಿದ್ದಾರೆ.
ಕೆಲವರು “ಇದು ಕೇವಲ ಮಾರ್ಕೆಟಿಂಗ್ ಟ್ರಿಕ್” ಎಂದು ಪ್ರತಿಕ್ರಿಯಿಸಿದರೆ, ಇನ್ನೂ ಕೆಲವರು ಇದೇ ವಸ್ತು ಸಾಮಾನ್ಯ ಅಂಗಡಿಯಲ್ಲಿ ₹5ಕ್ಕೆ ಸಿಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ನಗರದ ಆಹಾರ ಸಂಸ್ಕೃತಿ ಮತ್ತು ದುಬಾರಿ ದರಗಳ ಬಗ್ಗೆ ಈ ಪೋಸ್ಟ್ ಹೊಸ ಚರ್ಚೆಗೆ ಕಾರಣವಾಗಿದೆ.



