ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಈ ಬಾರಿ ಹೊಸ ಆಕರ್ಷಣೆಯಾಗಿ ಸೇರ್ಪಡೆಯಾಗಿರುವ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ರಾಜಮನೆತನದಿಂದ ವಿರೋಧ ವ್ಯಕ್ತವಾಗಿದೆ.
ದಸರಾ ಸಂದರ್ಭದಲ್ಲಿ ಕಂಬಳ ಆಯೋಜಿಸುವ ನಿರ್ಧಾರದ ಬಗ್ಗೆ ಪ್ರಮೋದಾದೇವಿ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದು, ಕಂಬಳಕ್ಕೆ ಅದರದೇ ಆದ ವಿಶಿಷ್ಟ ಹಿನ್ನೆಲೆ ಇರೋದ್ರಿಂದ ಪ್ರತ್ಯೇಕವಾಗಿ ಆಯೋಜಿಸಿದ್ದರೆ ಹೆಚ್ಚು ಗಮನ ಸೆಳೆಯುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಬಳ ಕರಾವಳಿ ಭಾಗದ ಪ್ರಮುಖ ಸಾಂಪ್ರದಾಯಿಕ ಕ್ರೀಡೆಯಾಗಿದ್ದು, ದಸರಾ ಕಾರ್ಯಕ್ರಮದ ಭಾಗವಾಗಿ ಸೇರಿಸುವ ಅಗತ್ಯವಿತ್ತೇ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದರು. ದಸರಾ ಉತ್ಸವದ ನಡುವೆ ಕಂಬಳ ಆಯೋಜಿಸಿದರೆ ಅದರ ವೈಶಿಷ್ಟ್ಯಕ್ಕೆ ತಕ್ಕಷ್ಟು ಪ್ರಚಾರ ಹಾಗೂ ಪ್ರಾಮುಖ್ಯತೆ ದೊರೆಯದಿರಬಹುದು ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:
ಸರ್ಕಾರ ದಸರಾಕ್ಕೆ ಹೊಸತನ ನೀಡುವ ಉದ್ದೇಶದಿಂದ ಕಂಬಳವನ್ನು ಸೇರಿಸಿರಬಹುದು. ಆದರೆ, ಕೇರಳದ ಓಣಂ, ಕರಾವಳಿಯ ಕಂಬಳ ಸೇರಿದಂತೆ ಪ್ರತಿಯೊಂದು ಆಚರಣೆಗೂ ತನ್ನದೇ ಆದ ಸಾಂಸ್ಕೃತಿಕ ಹಿನ್ನೆಲೆಯಿದೆ ಎಂದ ಅವರು, ದಸರಾದಲ್ಲಿ ಕಂಬಳ ಆಯೋಜಿಸುವ ಕುರಿತು ಸರ್ಕಾರ ತಮ್ಮ ಅಭಿಪ್ರಾಯ ಕೇಳಿಲ್ಲ ಎಂದರು.
ಈ ನಡುವೆ, 2026ರ ಮೈಸೂರು ದಸರಾ ಅಧಿಕೃತ ಕಾರ್ಯಕ್ರಮದಲ್ಲಿ ಅಕ್ಟೋಬರ್ 18 ಮತ್ತು 19ರಂದು ವಿಟಿಯು ಕಾಲೇಜು ಸಮೀಪ ಕಂಬಳ ಆಯೋಜಿಸಲಾಗಿರುವುದನ್ನು ದಸರಾ ಸಮಿತಿ ಪ್ರಕಟಿಸಿತ್ತು.



