ಹೊಸದಿಗಂತ ವರದಿ ಮಂಗಳೂರು:
ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರದ ಮಹತ್ವಾಕಾಂಕ್ಷಿ ಹೆಜ್ಜೆಯಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್ (ಆಳ್ವಾಸ್ ಮೆಡಿಕಲ್ ಕಾಲೇಜು) ಸೋಮವಾರ ಮಿಜಾರಿನ ಶ್ರೀಮತಿ ಶೋಭಾ ಮೋಹನ ಆಳ್ವ ಆವರಣದಲ್ಲಿ ಉದ್ಘಾಟನೆಗೊಂಡಿತು.

ಆವರಣದ ಮಿಜಾರುಗುತ್ತು ಶ್ರೀಮತಿ ಸುಂದರಿ ಆನಂದ ಆಳ್ವ ವೇದಿಕೆಯಲ್ಲಿ ಕಾಲೇಜು ಉದ್ಘಾಟಿಸಿ ಮಾತನಾಡಿದ ಕೇಂದ್ರದ ಶಿಕ್ಷಣ, ಆಹಾರ ಮತ್ತು ಸಾರ್ವಜನಿಕ ವಿತರಣೆ, ಗ್ರಾಹಕ ವ್ಯವಹಾರಗಳು, ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಆಳ್ವಾಸ್ ಪರಿಗಣಿತ ವಿಶ್ವವಿದ್ಯಾಲಯದ ಮಾನ್ಯತೆ ಇನ್ನೊಂದು ತಿಂಗಳಲ್ಲಿ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಭಾರತದಲ್ಲಿ 1.4 ಲಕ್ಷ ವೈದ್ಯಕೀಯ ಸೀಟು
1.03 ಲಕ್ಷ ಪೇಟೆಂಟ್, 2.3 ಲಕ್ಷ ಸ್ಟಾರ್ಟ್ ಅಪ್ ಸೇರಿದಂತೆ ಭಾರತದ ಶೈಕ್ಷಣಿಕ ಸಾಧನೆ ಜಾಗತಿಕ ಗಮನ ಸೆಳೆಯುತ್ತಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಹೆಚ್ಚಿನ ಸ್ಟಾರ್ಟ್ ಅಪ್ಗಳು ರಾಜ್ಯ ಹಾಗೂ ದಕ್ಷಿಣ ಕನ್ನಡದಿಂದ ಬರಲಿ’ ಎಂದು ಆಶಿಸಿದ ಅವರು, ’ಹೊಸ ಯೋಚನೆ -ಯೋಜನೆ ವೈದ್ಯಕೀಯ ಕ್ಷೇತ್ರದಿಂದ ಬರಲಿ ಎಂದರು.ಯುವ ಜನತೆಗೆ ಸಾಕಷ್ಟು ಅವಕಾಶಗಳಿವೆ. ಕೇಂದ್ರವು ಪ್ರಸ್ತುತ 2.5 ಲಕ್ಷ ಕೋಟಿ ರೂಪಾಯಿ ಸಂಶೋಧನೆಗೆ ಮೀಸಲು ಇಟ್ಟಿದೆ. 21ನೇ ಶತಮಾನ ಭಾರತದ್ದು, 2047 ಕ್ಕೆ ವಿಕಸಿತ ಭಾರತ ಆಗಲಿದೆ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ಎನ್. ತಿಪ್ಪೇಸ್ವಾಮಿ ಮಾತನಾಡಿ, ಶಿಕ್ಷಣದ ಜೊತೆ ಸಂಸ್ಕಾರ ಅವಶ್ಯ. ಇದಕ್ಕೆ ಅತ್ಯುತ್ತಮ ಸಂಸ್ಥೆ ಆಳ್ವಾಸ್. ಆಳ್ವಾಸ್ ಸಾಮಾಜಿಕ ಬದ್ಧತೆ ಶ್ಲಾಘನೀಯ ಎಂದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ ಮಾತನಾಡಿ, ಆಳ್ವಾಸ್ ನಮ್ಮ ವಿ.ವಿ.ಯ ಭಾಗವಾಗಿರುವುದು ನಮ್ಮೆಲ್ಲರ ಹೆಮ್ಮೆ. ಶಿಕ್ಷಣ ಮಿದುಳಿನ ಜೊತೆ ಹೃದಯಕ್ಕೂ ಸಿಗಬೇಕು ಎಂಬ ಸಾಕ್ರೆಟಿಸ್ ಮಾತಿಗೆ ಡಾ. ಎಂ ಮೋಹನ ಆಳ್ವರ ಮಾದರಿ ಅತ್ಯುತ್ತಮ ನಿದರ್ಶನ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ. ಮೋಹನ ಆಳ್ವ, ಆಳ್ವಾಸ್ ಮೆಡಿಕಲ್ ಕಾಲೇಜು ನಿರ್ಮಾಣದ ಹಿಂದೆ ಶ್ರಮಿಸಿದ, ಕೊಡುಗೆ ನೀಡಿದ ಎಲ್ಲರಿಗೂ ಕೃತಜ್ಞತೆ ವ್ಯಕ್ತಪಡಿಸಿದರು.

ವೈದ್ಯಕೀಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಹಿರಿಯ ವೈದ್ಯರು ಹಾಗೂ ವೈದ್ಯಕೀಯ ದಿಗ್ಗಜರ ಸ್ಮರಣೆಯನ್ನು ಗೌರವಿಸುವ ಉದ್ದೇಶದಿಂದ ಕಾಲೇಜಿನ ವಿವಿಧ ಚಿಕಿತ್ಸಾ ಕೇಂದ್ರಗಳು ಮತ್ತು ವಿಭಾಗಗಳಿಗೆ ಟಿ.ಎಂ.ಎ. ಪೈ, ಡಾ. ಎಸ್. ಕಾಂತ, ಡಾ. ಶಂಕರ್ ನಾಯಕ್, ಡಾ. ವಿ.ಎಸ್. ಆಚಾರ್ಯ, ಡಾ. ಶಾಂತರಾಮ್ ಶೆಟ್ಟಿ, ವಿನಯ್ ಹೆಗ್ಡೆ, ಡಾ. ಚಂದ್ರಶೇಖರ್ ಶೆಟ್ಟಿ, ಡಾ. ಸುಧಾಕರ್ ಶೆಟ್ಟಿ, ಡಾ. ವಿ.ಎಸ್. ಕಾಮತ್, ಡಾ. ಮನೋರಮಾ, ಡಾ. ಕೃಷ್ಣಮೂರ್ತಿ ಹಾಗೂ ಡಾ. ಅಮರನಾಥ ಹೆಗ್ಡೆ ಅವರ ಹೆಸರುಗಳನ್ನು ಇಡಲಾಗಿದೆ ಎಂದು ಅವರು ತಿಳಿಸಿದರು. ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಮನ ಸೆಳೆಯಿತು. ವಿವಿಧ ಗಣ್ಯರು ವೇದಿಕೆಯಲ್ಲಿದ್ದು ಶುಭ ಹಾರೈಸಿದರು.



