April 3, 2026
Friday, April 3, 2026
spot_img

ನನ್ನ ಹೋರಾಟ ನಿಂತಿಲ್ಲ: ರಾಜ್ಯಸಭಾ ಉಪನಾಯಕ ಹುದ್ದೆ ಕಳೆದುಕೊಂಡ ರಾಘವ್ ಚಡ್ಡಾ ಫಸ್ಟ್ ರಿಯಾಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಮ್ ಆದ್ಮಿ ಪಕ್ಷದೊಳಗಿನ ರಾಜಕೀಯ ಬೆಳವಣಿಗೆಗೆ ಹೊಸ ತಿರುವು ಸಿಕ್ಕಿದ್ದು, ರಾಜ್ಯಸಭೆಯಲ್ಲಿ ಉಪನಾಯಕ ಹುದ್ದೆಯಿಂದ ವಜಾಗೊಂಡ ಬಳಿಕ ಸಂಸದ ರಾಘವ್ ಚಡ್ಡಾ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ವಿಡಿಯೋ ಸಂದೇಶದ ಮೂಲಕ ಮಾತನಾಡಿದ ಅವರು, ‘ನನ್ನ ಧ್ವನಿಯನ್ನು ಮೌನಗೊಳಿಸಲು ಪ್ರಯತ್ನಿಸಿದ್ದಾರೆ, ಆದರೆ ನನ್ನ ಹೋರಾಟ ನಿಂತಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಹುದ್ದೆ ಕಳೆದುಕೊಂಡ ನಂತರ ಮೌನ ಮುರಿದ ಚಡ್ಡಾ, ಜನರ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸಿದ್ದಕ್ಕಾಗಿ ತಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬ ಅಸಮಾಧಾನ ಹೊರಹಾಕಿದರು. ಮಧ್ಯಮ ವರ್ಗದ ತೆರಿಗೆ ಹೊರೆ, ಡೇಟಾ ಬಳಕೆ ಸಮಸ್ಯೆಗಳು, ಪಿತೃತ್ವ ರಜೆ ಹಕ್ಕು ಹಾಗೂ ವಿಮಾನ ನಿಲ್ದಾಣಗಳಲ್ಲಿ ಹೆಚ್ಚುವರಿ ಲಗೇಜ್ ಶುಲ್ಕದಂತಹ ಜನಸಾಮಾನ್ಯರ ಪ್ರಶ್ನೆಗಳನ್ನು ಎತ್ತಿದ್ದೇನೆ, ಅದು ತಪ್ಪಾ ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ:

ಗುರುವಾರ ಎಎಪಿ ಪಕ್ಷವು ರಾಜ್ಯಸಭಾ ಕಾರ್ಯದರ್ಶಿಗೆ ಪತ್ರ ಬರೆದು, ಚಡ್ಡಾ ಅವರನ್ನು ಉಪನಾಯಕ ಸ್ಥಾನದಿಂದ ತೆರವುಗೊಳಿಸುವಂತೆ ಮನವಿ ಮಾಡಿತ್ತು. ಜೊತೆಗೆ, ಸದನದಲ್ಲಿ ಪಕ್ಷದ ಪರವಾಗಿ ಮಾತನಾಡುವ ಅವಕಾಶವನ್ನು ನೀಡಬಾರದು ಎಂದು ಸಹ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅವರ ಬದಲಿಗೆ ಪಂಜಾಬ್‌ನ ಸಂಸದ ಅಶೋಕ್ ಮಿತ್ತಲ್ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.

ಒಮ್ಮೆ ಪಕ್ಷದ ಪ್ರಮುಖ ಮುಖವಾಗಿ ಪರಿಗಣಿಸಲ್ಪಟ್ಟಿದ್ದ ರಾಘವ್ ಚಡ್ಡಾ ಮತ್ತು ಪಕ್ಷದ ನಾಯಕತ್ವದ ನಡುವೆ ಇತ್ತೀಚಿನ ದಿನಗಳಲ್ಲಿ ಅಂತರ ಹೆಚ್ಚಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಈ ಬೆಳವಣಿಗೆ ಎಎಪಿಯ ಒಳಗಿನ ಅಸಮಾಧಾನವನ್ನು ಮತ್ತೊಮ್ಮೆ ಬಹಿರಂಗಗೊಳಿಸಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಒಳರಾಜಕೀಯ ಇನ್ನಷ್ಟು ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !