July 27, 2026
Monday, July 27, 2026
spot_img

ಪಾರಂಪರಿಕ ಆಚರಣೆಗಳ ಪುನರುಜ್ಜೀವನಕ್ಕೆ ಮುನ್ನುಡಿ ಬರೆಯಲಿದೆ ರಾಘವೇಶ್ವರ ಶ್ರೀಗಳ ‘ಅನ್ನಬ್ರಹ್ಮ ಚಾತುರ್ಮಾಸ್ಯ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಅಶೋಕೆಯಲ್ಲಿ ಜು.29 ರಿಂದ ಸೆ.26ರ ತನಕ ಹಮ್ಮಿಕೊಂಡಿರುವ ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರ ‘ಅನ್ನಬ್ರಹ್ಮ ಚಾತುರ್ಮಾಸ್ಯ’ವು ಪಾರಂಪರಿಕ ಆಚರಣೆ, ಆಹಾರ ಪದ್ಧತಿ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಅವುಗಳ ಪುನರುಜ್ಜೀವನಕ್ಕೆ ಮುನ್ನುಡಿ ಬರೆಯಲಿದೆ.

ಚಾತುರ್ಮಾಸ್ಯದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಇಂದು ನಾವು ಅಳವಡಿಸಿಕೊಂಡಿರುವ ಆಹಾರ ಹಾಗೂ ಊಟದ ವ್ಯವಸ್ಥೆಯಲ್ಲಿ ಅನೇಕ ಲೋಪಗಳಿವೆ. ನಾವು ಏನನ್ನು ತಿನ್ನುತ್ತೇವೆ, ಹೇಗೆ ತಿನ್ನುತ್ತೇವೆ ಎಂಬುದು ನಮ್ಮ ಮೇಲೆ ಮಹತ್ತರವಾದ ಪರಿಣಾಮ ಉಂಟುಮಾಡುತ್ತದೆ. ನಮ್ಮ ಪ್ರಾಚೀನ ಆಚರಣೆಗಳ ಹಿನ್ನೆಲೆ ತಿಳಿಯದೇ ಇರುವುದರಿಂದ ನಮ್ಮ ಆಚಾರಗಳು ಕಂದಾಚಾರ ಇರಬಹುದು ಎಂದು ಭಾವಿಸಿ ಅನೇಕರು ಅವುಗಳನ್ನು ಕೈಬಿಟ್ಟಿದ್ದಾರೆ. ನಮ್ಮ ಪಾರಂಪರಿಕ ಆಚರಣೆಗಳ ವೈಜ್ಞಾನಿಕತೆ ಹಾಗೂ ಹಿನ್ನೆಲೆಯನ್ನು ಸಮಾಜಕ್ಕೆ ತಿಳಿಸಬೇಕಾದ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ಚಾತುರ್ಮಾಸ್ಯವನ್ನು ವಿಚಾರ ಪ್ರಧಾನ ಚಾತುರ್ಮಾಸ್ಯವಾಗಿ ಆಚರಿಸಲಾಗುತ್ತಿದ್ದು, ಚಾತುರ್ಮಾಸ್ಯದಲ್ಲಿ ತತ್ತ್ವ ಸಂವಾದಗಳು ಇರಲಿವೆ ಎಂದರು.

ಬಂದವನನ್ನು ಭಗವಂತ ಎಂದು ಕಾಣಬೇಕು. ಮಠಕ್ಕೆ ಬಂದವನು ಶ್ರೀಮಂತನೋ ಅಥವಾ ಬಡವನೋ ಎಂಬ ಬೇಧ ಭಾವ ಮಾಡಬಾರದು. ಮಠಕ್ಕೆ ಬಂದವರೆಲ್ಲರೂ ಸಂತೃಪ್ತರಾಗಿ ಹಿಂತಿರುಗುವಂತೆ ಮಾಡಬೇಕಾದ ಕರ್ತವ್ಯ ಕಾರ್ಯಕರ್ತರದ್ದು ಎಂದು ಕರೆ ನೀಡಿದರು. ಉತ್ತರ ಕನ್ನಡ, ಶಿವಮೊಗ್ಗ, ಮಂಗಳೂರು, ಬೆಂಗಳೂರು ಸೇರಿದಂತೆ ಎಲ್ಲಾ ಭಾಗಗಳಿಂದಲೂ ಚಾತುರ್ಮಾಸ್ಯಕ್ಕೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದಕ್ಕೆ ಅವರು ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ:

ಸಭೆಯಲ್ಲಿ ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್., ಶಾಸನತಂತ್ರದ ಕಾರ್ಯದರ್ಶಿ ಕೆ.ಪಿ. ಎಡಪ್ಪಾಡಿ, ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಮಂಜುನಾಥ ಸುವರ್ಣಗದ್ದೆ, ಚಾತುರ್ಮಾಸ್ಯದ ಪ್ರಧಾನ ಸಂಯೋಜಕ ಚಂದನ್ ಶಾಸ್ತ್ರಿ ಸೇರಿದಂತೆ ಎಲ್ಲಾ ಭಾಗಗಳ ಪ್ರಮುಖರು ಉಪಸ್ಥಿತರಿದ್ದರು.

ವ್ಯಾಸಪೂಜೆ ಮೂಲಕ ಚಾತುರ್ಮಾಸ್ಯಕ್ಕೆ ಚಾಲನೆ

ಈ ಬಾರಿ ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ಜು.29 ರಿಂದ ಸೆ.26ರ ತನಕ ಆಹಾರದ ಕುರಿತಾದ ಜಾಗೃತಿಯ ‘ಅನ್ನಬ್ರಹ್ಮ ಚಾತುರ್ಮಾಸ್ಯ’ ನಡೆಯಲಿದೆ. ಜು.29ರಂದು ವ್ಯಾಸಪೂಜೆ ಮೂಲಕ ಶ್ರೀಗಳು ತಮ್ಮ 33ನೇ ವರ್ಷದ ಚಾತುರ್ಮಾಸ್ಯದ ಸಂಕಲ್ಪವನ್ನು ಸ್ವೀಕರಿಸಲಿದ್ದಾರೆ.

ಚಾತುರ್ಮಾಸ್ಯ ವ್ರತ ಗುರುಗಳಿಗಾದರೆ, ಶಿಷ್ಯಭಕ್ತರಿಗೆ ಇದು ಹಬ್ಬ ಎಂಬ ಪರಿಕಲ್ಪನೆಯಲ್ಲಿ ಪ್ರತಿವರ್ಷದ ಚಾತುರ್ಮಾಸ್ಯವನ್ನು ಸಮೂಹದ ಒಳಿತಿಗೆ ಪೂರಕವಾಗಿ ಯೋಜಿಸುತ್ತಾ ಬಂದಿದ್ದು, ಪ್ರತಿವರ್ಷ ಒಂದೊಂದು ವಿಷಯಾಧಾರಿತವಾಗಿ ಚಾತುರ್ಮಾಸ್ಯದಲ್ಲಿ ಸಮಾಜ ಜಾಗೃತಿಯನ್ನು ಮೂಡಿಸುತ್ತಿರುವುದು ಶ್ರೀರಾಮಚಂದ್ರಾಪುರ ಮಠದ ವಿಶೇಷತೆಯಾಗಿದೆ.

ಧಾನ್ಯ ಲಕ್ಷ್ಮೀ ಪೂಜೆ

‘ಅನ್ನಬ್ರಹ್ಮ ಚಾತುರ್ಮಾಸ್ಯ’ಕ್ಕಾಗಿ ನಾಡಿನಾದ್ಯಂತ ಶಿಷ್ಯ ಭಕ್ತರಿಂದ ವಿವಿಧ ಸುವಸ್ತುಗಳು ಸಮರ್ಪಿತವಾಗಿದ್ದು, ಶ್ರೀಮಠದ 11 ಮಂಡಲಗಳು, ಅಂಗಸಂಸ್ಥೆಗಳು ಹಾಗೂ ರಾಜ್ಯಾದ್ಯಂತದ ಶಿಷ್ಯಭಕ್ತರಿಂದ ಸಮರ್ಪಿತವಾದ ಧಾನ್ಯಲಕ್ಷ್ಮಿಗೆ ರಾಘವೇಶ್ವರ ಶ್ರೀಗಳು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕುಮಟಾದ ಶಾಸಕ ದಿನಕರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !