April 3, 2026
Friday, April 3, 2026
spot_img

CSK vs PBKS: ಚಿದಂಬರಂ ಮೈದಾನದಲ್ಲಿ ಸೇಡಿನ ಸಮರ: ‘ಕಿಂಗ್ಸ್’ ಪಟ್ಟಕ್ಕಾಗಿ ಬಿಗ್ ಫೈಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ ರೋಚಕತೆ ಹೆಚ್ಚಾಗುತ್ತಿದೆ. ಇಂದು ಚೆನ್ನೈನ ಐತಿಹಾಸಿಕ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಹಳದಿ ಪಡೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗುತ್ತಿವೆ. ಸಂಜೆ 7:30ಕ್ಕೆ ಆರಂಭವಾಗಲಿರುವ ಈ ಪಂದ್ಯ ಎರಡು ತಂಡಗಳಿಗೂ ಪ್ರತಿಷ್ಠೆಯ ಕಣವಾಗಿದೆ.

ಕಳೆದ ಸೀಸನ್‌ನಲ್ಲಿ ಪಂಜಾಬ್ ವಿರುದ್ಧ ಆಡಿದ್ದ ಎರಡೂ ಪಂದ್ಯಗಳಲ್ಲಿ ಸಿಎಸ್‌ಕೆ ಸೋಲೊಪ್ಪಿಕೊಂಡಿತ್ತು. ಈ ಬಾರಿ ಆ ಸೋಲುಗಳಿಗೆ ತಕ್ಕ ಉತ್ತರ ನೀಡಲು ಸಿಎಸ್‌ಕೆ ತಯಾರಿ ನಡೆಸಿದೆ. ಆದರೆ, ಪ್ರಸಕ್ತ ಆವೃತ್ತಿಯ ಮೊದಲ ಪಂದ್ಯದಲ್ಲೇ ಸೋತು ಒತ್ತಡದಲ್ಲಿರುವ ಚೆನ್ನೈಗೆ, ಮೊದಲ ಪಂದ್ಯ ಗೆದ್ದು ಬೀಗುತ್ತಿರುವ ಪಂಜಾಬ್ ಕಠಿಣ ಸವಾಲು ನೀಡುವ ನಿರೀಕ್ಷೆಯಿದೆ.

ಐಪಿಎಲ್ ಇತಿಹಾಸದಲ್ಲಿ ಈ ಎರಡು ತಂಡಗಳು ಇದುವರೆಗೆ ಒಟ್ಟು 32 ಬಾರಿ ಮುಖಾಮುಖಿಯಾಗಿವೆ. ವಿಶೇಷವೆಂದರೆ, ಎರಡೂ ತಂಡಗಳು ತಲಾ 16 ಪಂದ್ಯಗಳನ್ನು ಗೆದ್ದು ಸಮಬಲ ಸಾಧಿಸಿವೆ. ಇಂದಿನ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೋ ಅವರು ಮುನ್ನಡೆ ಕಾಯ್ದುಕೊಳ್ಳಲಿದ್ದಾರೆ.

ಚೆಪಾಕ್ ಕ್ರೀಡಾಂಗಣದಲ್ಲಿ ಟಾಸ್ ಬಹಳ ಮುಖ್ಯವಾದ ಪಾತ್ರ ವಹಿಸಲಿದೆ. ಕಳೆದ ಐದು ಪಂದ್ಯಗಳ ಅಂಕಿಅಂಶಗಳನ್ನು ಗಮನಿಸಿದರೆ, ಮೊದಲು ಬ್ಯಾಟಿಂಗ್ ಮಾಡಿದ ತಂಡ ನಾಲ್ಕು ಬಾರಿ ಜಯಗಳಿಸಿದೆ. ಹೀಗಾಗಿ ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವುದು ಬಹುತೇಕ ಖಚಿತ.

ಸತತ ಸೋಲಿನ ಸುಳಿಯಿಂದ ಹೊರಬರಲು ಸಿಎಸ್‌ಕೆ ಎರಡು ಮಹತ್ವದ ಬದಲಾವಣೆಗಳಿಗೆ ಮುಂದಾಗಿದೆ. ಗಾಯದಿಂದ ಚೇತರಿಸಿಕೊಂಡಿರುವ ಸ್ಫೋಟಕ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ತಂಡ ಸೇರುವ ಸಾಧ್ಯತೆಯಿದೆ. ಹಾಗೆಯೇ, ಮೊದಲ ಪಂದ್ಯದಲ್ಲಿ ವಿಫಲರಾಗಿದ್ದ ಆಯುಷ್ ಮ್ಹಾತ್ರೆ ಬದಲಿಗೆ ಆಲ್‌ರೌಂಡರ್ ಪ್ರಶಾಂತ್ ವೀರ್ ಅವರಿಗೆ ಸ್ಥಾನ ಸಿಗುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !