ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದ್ದು, ಪ್ರಮುಖವಾಗಿ ಮೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಿದೆ. ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು-ಮಿಂಚಿನೊಂದಿಗೆ ಮಳೆಯಾಗುವ ಮುನ್ಸೂಚನೆ ಇದೆ ಎಂದು ಇಲಾಖೆ ತಿಳಿಸಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಮಂಡ್ಯ, ರಾಮನಗರ, ಹಾಸನ, ಕೋಲಾರ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ನವೆಂಬರ್ 6 ರವರೆಗೆ ಈ ಭಾಗಗಳಲ್ಲಿ ಸಿಡಿಲು ಮತ್ತು ಬಿರುಗಾಳಿಯ ಮುನ್ನೆಚ್ಚರಿಕೆಯನ್ನು ವಿಸ್ತರಿಸಲಾಗಿದೆ.
ಕರಾವಳಿ ಮತ್ತು ಒಳನಾಡಿನ ಸ್ಥಿತಿ
ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದ ಕರಾವಳಿ ಭಾಗಗಳಲ್ಲೂ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಇನ್ನು ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಬಾಗಲಕೋಟೆ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಬಹುದು. ಆದರೆ, ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಇದೇ ವೇಳೆ ದಾವಣಗೆರೆಯಲ್ಲಿ ಕನಿಷ್ಠ ತಾಪಮಾನ 17.3 ಡಿಗ್ರಿ ಸೆಲ್ಸಿಯಸ್ನಷ್ಟು ದಾಖಲಾಗಿದೆ.
ಕಳೆದ 24 ಗಂಟೆಗಳ ಮಳೆ ವಿವರ
ರಾಜ್ಯದ ಸುಳ್ಯ, ಸರಗೂರು ಮತ್ತು ಮಿರ್ಲೆಯಲ್ಲಿ ಗರಿಷ್ಠ 7 ಸೆಂ.ಮೀ ಮಳೆ ದಾಖಲಾಗಿದೆ. ಎಚ್.ಡಿ.ಕೋಟೆಯಲ್ಲಿ 6 ಸೆಂ.ಮೀ ಹಾಗೂ ಸಕಲೇಶಪುರದಲ್ಲಿ 4 ಸೆಂ.ಮೀ ನಷ್ಟು ಮಳೆಯಾಗಿರುವುದು ವರದಿಯಾಗಿದೆ.



