ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ಮಂದಿಯ ಬಹುದಿನಗಳ ನಿರೀಕ್ಷೆಯಾಗಿದ್ದ ಈಜಿಪುರ ಫ್ಲೈಓವರ್ ಕಾಮಗಾರಿ ಈಗ ಮತ್ತೆ ವಿಳಂಬವಾಗುವ ಲಕ್ಷಣಗಳು ದಟ್ಟವಾಗಿವೆ. ಜೂನ್ ತಿಂಗಳೊಳಗೆ ಸಾರ್ವಜನಿಕರ ಬಳಕೆಗೆ ಮುಕ್ತವಾಗಬೇಕಿದ್ದ ಈ ಮೇಲ್ಸೇತುವೆ, ಈಗ ಆಗಸ್ಟ್ ವೇಳೆಗೆ ಪೂರ್ಣಗೊಳ್ಳಬಹುದು ಎಂದು ಅಂದಾಜಿಸಲಾಗಿದೆ.
ಈಗಾಗಲೇ ಮಾರ್ಚ್ ತಿಂಗಳ ಗಡುವನ್ನು ಹೊಂದಿದ್ದ ಈ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆಯ ಅಡೆತಡೆ ಹಾಗೂ ಇಂಜಿನಿಯರ್‌ಗಳ ವರ್ಗಾವಣೆ ದೊಡ್ಡ ಹೊಡೆತ ನೀಡಿದೆ. 2.38 ಕಿಲೋಮೀಟರ್ ಉದ್ದದ ಈ ಫ್ಲೈಓವರ್‌ನಲ್ಲಿ ಒಟ್ಟು 762 ಸೆಗ್ಮೆಂಟ್‌ಗಳಿದ್ದು, ಈ ಪೈಕಿ 20 ಸೆಗ್ಮೆಂಟ್‌ಗಳ ಅಳವಡಿಕೆ ಇನ್ನೂ ಬಾಕಿ ಉಳಿದಿದೆ. ವಿಶೇಷವಾಗಿ ಸೇಂಟ್ ಜಾನ್ಸ್ ಜಂಕ್ಷನ್ ಬಳಿ ಪಿಯರ್ ಕೆಲಸಗಳು ಈಗಷ್ಟೇ ಆರಂಭವಾಗಿದ್ದು, ಪೂರ್ಣಗೊಳ್ಳಲು ಕನಿಷ್ಠ ಕೆಲವು ವಾರಗಳ ಸಮಯ ಬೇಕಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2017ರಲ್ಲಿ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯಿಂದ ಆರಂಭವಾದ ಈ ಯೋಜನೆ ಅರ್ಧದಲ್ಲೇ ನಿಂತಿತ್ತು. ನಂತರ 2024ರಲ್ಲಿ ಹೈದರಾಬಾದ್ ಮೂಲದ ಬಿಎಸ್ಸಿಪಿಎಲ್ ಸಂಸ್ಥೆಗೆ 15 ತಿಂಗಳ ಗಡುವಿನೊಂದಿಗೆ ಜವಾಬ್ದಾರಿ ನೀಡಲಾಗಿತ್ತು. ಪ್ರಸ್ತುತ ಡೊಮ್ಲೂರ್ ಮತ್ತು ಕೇಂದ್ರೀಯ ಸದನ ಭಾಗದಲ್ಲಿ ರ್ಯಾಂಪ್ ಕಾಮಗಾರಿಗಳು ಪ್ರಗತಿಯಲ್ಲಿದ್ದರೂ, ಮಣ್ಣಿನ ಸ್ಥಿರೀಕರಣ ಹಾಗೂ ಡಾಂಬರೀಕರಣಕ್ಕೆ ಹೆಚ್ಚಿನ ಸಮಯ ತಗುಲಲಿದೆ.
ಸಣ್ಣಪುಟ್ಟ ಕಾರಣಗಳನ್ನು ನೀಡಿ ಪದೇ ಪದೇ ಕಾಮಗಾರಿ ಮುಂದೂಡುತ್ತಿರುವುದಕ್ಕೆ ಸ್ಥಳೀಯ ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಫ್ಲೈಓವರ್ ಸಿದ್ಧವಾದರೆ ಕೋರಮಂಗಲದ ಸೋನಿ ವರ್ಲ್ಡ್ ಸಿಗ್ನಲ್ ಸೇರಿದಂತೆ ಒಟ್ಟು 7 ಪ್ರಮುಖ ಜಂಕ್ಷನ್‌ಗಳ ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಬಹುದು ಹಾಗೂ ಕನಿಷ್ಠ 30 ನಿಮಿಷಗಳ ಪ್ರಯಾಣದ ಸಮಯ ಉಳಿತಾಯವಾಗಲಿದೆ. ಆದಷ್ಟು ಬೇಗ ಈ ‘ನನೆಗುದಿಗೆ ಬಿದ್ದ’ ಯೋಜನೆಗೆ ಮುಕ್ತಿ ನೀಡಿ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.



