April 3, 2026
Friday, April 3, 2026
spot_img

ಹ್ಯಾಟ್ರಿಕ್ ಗೆಲುವಿನ ಬೆನ್ನಲ್ಲೇ ಪಾಕಿಸ್ತಾನಕ್ಕೆ ವಾರ್ನರ್ ಗುಡ್-ಬೈ? ಅಭಿಮಾನಿಗಳಲ್ಲಿ ಆತಂಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಇತಿಹಾಸದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಸದ್ಯ ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಕರಾಚಿ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಾ ಸುದ್ದಿಯಲ್ಲಿದ್ದಾರೆ. ಈ ನಡುವೆ ವಾರ್ನರ್ ಪಾಕಿಸ್ತಾನ ತೊರೆದು ಹಠಾತ್ ಆಸ್ಟ್ರೇಲಿಯಾಕ್ಕೆ ಮರಳಿದ್ದು, ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಸೋಷಿಯಲ್ ಮೀಡಿಯಾದಲ್ಲಿ ವಾರ್ನರ್ ಮತ್ತು ಸಹ ಆಟಗಾರ ಮೋಯಿನ್ ಅಲಿ ನಡುವೆ ಜಗಳ ನಡೆದಿದೆ ಎಂಬಂತೆ ಬಿಂಬಿಸುವ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ತಂಡದ ನಿರ್ದೇಶಕ ಹೈದರ್ ಅಜರ್ ಅವರು ವಾರ್ನರ್ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿದ್ದು, ಇದೇ ಕಾರಣಕ್ಕೆ ವಾರ್ನರ್ ತಂಡ ತೊರೆದಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ವಾರ್ನರ್, “ಅದು ಕೇವಲ ತಮಾಷೆಯಾಗಿತ್ತು, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ” ಎಂದು ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಡೇವಿಡ್ ವಾರ್ನರ್ ಆಸ್ಟ್ರೇಲಿಯಾಕ್ಕೆ ಮರಳಿರುವುದು ಯಾವುದೇ ಜಗಳಕ್ಕಾಗಿ ಅಲ್ಲ, ಬದಲಾಗಿ ಸಿಕ್ಕಿರುವ ಸಣ್ಣ ವಿರಾಮಕ್ಕಾಗಿ! ಕರಾಚಿ ಕಿಂಗ್ಸ್ ತಂಡದ ಮುಂದಿನ ಪಂದ್ಯವು ಏಪ್ರಿಲ್ 9 ರಂದು ಪೇಶಾವರ್ ಝಲ್ಮಿ ವಿರುದ್ಧ ನಡೆಯಲಿದೆ. ಈ ಪಂದ್ಯಕ್ಕೆ ಇನ್ನೂ 6 ದಿನಗಳ ಬಾಕಿ ಇರುವುದರಿಂದ, ಕುಟುಂಬದೊಂದಿಗೆ ಸಮಯ ಕಳೆಯಲು ವಾರ್ನರ್ ತವರಿಗೆ ಮರಳಿದ್ದಾರೆ. ಮುಂದಿನ ಪಂದ್ಯಕ್ಕೂ ಮುನ್ನ ಅವರು ಮತ್ತೆ ಪಾಕಿಸ್ತಾನಕ್ಕೆ ಬಂದು ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಪ್ರಸಕ್ತ ಟೂರ್ನಿಯಲ್ಲಿ ಕರಾಚಿ ಕಿಂಗ್ಸ್ ಆಡಿದ ಮೂರೂ ಪಂದ್ಯಗಳಲ್ಲಿ ಜಯಭೇರಿ ಬಾರಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನಾಯಕನಾಗಿ ಮಾತ್ರವಲ್ಲದೆ ಬ್ಯಾಟ್ಸ್‌ಮನ್ ಆಗಿಯೂ ಮಿಂಚುತ್ತಿರುವ ವಾರ್ನರ್, 3 ಪಂದ್ಯಗಳಲ್ಲಿ ಒಂದು ಅರ್ಧಶತಕ ಸೇರಿದಂತೆ 93 ರನ್ ಗಳಿಸಿದ್ದಾರೆ. ಐಪಿಎಲ್ ಹರಾಜಿನಲ್ಲಿ ಅಚ್ಚರಿಯ ರೀತಿಯಲ್ಲಿ ಅನ್-ಸೋಲ್ಡ್ ಆಗಿದ್ದ ವಾರ್ನರ್, ಈಗ ಪಾಕ್ ನೆಲದಲ್ಲಿ ತಮ್ಮ ಬ್ಯಾಟಿಂಗ್ ಪವರ್ ತೋರಿಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !