ಹೊಸದಿಗಂತ ಡಿಜಿಟಲ್ ಡೆಸ್ಕ್:
“ಕೇಂದ್ರ ಸರ್ಕಾರ ನೀಡುವ ಅಕ್ಕಿಯನ್ನು ಕದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನದೇ ಯೋಜನೆ ಎಂದು ಬೋರ್ಡ್ ಹಾಕಿಕೊಳ್ಳುತ್ತಿದೆ. ಸಿದ್ದರಾಮಯ್ಯ ಅವರು ‘ಅನ್ನರಾಮಯ್ಯ’ ಅಲ್ಲ, ಅಕ್ಕಿ ಕದ್ದ ‘ಕನ್ನರಾಮಯ್ಯ’ ಮತ್ತು ‘ಸುಳ್ಳುರಾಮಯ್ಯ’ ಆಗಿದ್ದಾರೆ,” ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಪದೇ ಪದೇ ಸುಳ್ಳು ಹೇಳುವ ಮೂಲಕ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. “ಅನ್ನಭಾಗ್ಯದ ಅಕ್ಕಿ ಕೇಂದ್ರದ್ದು, ಆದರೆ ಚೀಲ ಮಾತ್ರ ರಾಜ್ಯ ಸರ್ಕಾರದ್ದು. ಇದು ಜನರಿಗೆ ಮಾಡುತ್ತಿರುವ ವಂಚನೆ. ಚುನಾವಣಾ ಸಮಯದಲ್ಲಿ ಘೋಷಿಸಿದ್ದ ‘ಇಂದಿರಾ ಗಾಂಧಿ ಕಿಟ್’ (ಬೇಳೆ, ಎಣ್ಣೆ ಇತ್ಯಾದಿ) ಇದುವರೆಗೆ ಜನರಿಗೆ ಸಿಕ್ಕಿಲ್ಲ, ಅದು ಕೇವಲ ಮರೀಚಿಕೆಯಾಗಿದೆ,” ಎಂದರು.
ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಬಾಕಿ ಇರುವ ಸುಮಾರು 5,000 ಕೋಟಿ ರೂ. ಮತ್ತು ಅನ್ನಭಾಗ್ಯದ 700 ಕೋಟಿ ರೂ. ಹಣ ಸೇರಿ ಒಟ್ಟು 5,700 ಕೋಟಿ ರೂ. ಮೊತ್ತ ಎಲ್ಲಿಗೆ ಹೋಯಿತು? ಎಂದು ಅಶೋಕ್ ಪ್ರಶ್ನಿಸಿದರು. ಬಿಜೆಪಿ ಗ್ಯಾರಂಟಿ ವಿರೋಧಿ ಎಂಬುದು ಸುಳ್ಳು ಆರೋಪ, ವಾಸ್ತವದಲ್ಲಿ ಹಣ ನೀಡದೆ ಓಡಿ ಹೋಗುತ್ತಿರುವುದು ಕಾಂಗ್ರೆಸ್ ಸರ್ಕಾರ ಎಂದು ಅವರು ಲೆಕ್ಕ ಕೇಳಿದರು.



