ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ 7ನೇ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅವರದೇ ತವರು ಮೈದಾನವಾದ ಚೆಪಾಕ್‌ನಲ್ಲಿ ಸೋಲಿಸುವ ಮೂಲಕ ಪಂಜಾಬ್ ಕಿಂಗ್ಸ್ ಸತತ ಎರಡನೇ ಜಯ ದಾಖಲಿಸಿದೆ. 210 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಂಜಾಬ್, ನಾಯಕ ಶ್ರೇಯಸ್ ಅಯ್ಯರ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 8 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವಂತಾದ ಚೆನ್ನೈ ತಂಡಕ್ಕೆ ಆರಂಭದಲ್ಲೇ ಸಂಜು ಸ್ಯಾಮ್ಸನ್ ವಿಕೆಟ್ ಕಳೆದುಕೊಂಡು ನಿರಾಸೆ ಅನುಭವಿಸಿತು. ಆದರೆ, 20 ವರ್ಷದ ಯುವ ಪ್ರತಿಭೆ ಆಯುಷ್ ಮ್ಹಾತ್ರೆ (73 ರನ್) ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಸರೆಯಾದರು. ಇವರಿಗೆ ಸಾಥ್ ನೀಡಿದ ಸರ್ಫರಾಜ್ ಖಾನ್ ಕೇವಲ 12 ಎಸೆತಗಳಲ್ಲಿ 32 ರನ್ ಸಿಡಿಸಿ ಪಂಜಾಬ್ ಬೌಲರ್‌ಗಳನ್ನು ಬೆಚ್ಚಿಬೀಳಿಸಿದರು. ಅಂತಿಮ ಹಂತದಲ್ಲಿ ಶಿವಂ ದುಬೆ (45* ರನ್) ತಮ್ಮ ಅನುಭವವನ್ನು ಧಾರೆ ಎರೆದು ಸ್ಕೋರ್ ಬೋರ್ಡ್ ಅನ್ನು 209ಕ್ಕೆ ತಲುಪಿಸಿದರು.
ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಪ್ರಿಯಾಂಶ್ ಆರ್ಯ (11 ಎಸೆತಗಳಲ್ಲಿ 39) ಸ್ಫೋಟಕ ಆರಂಭ ನೀಡಿದರು. ಬಳಿಕ ಪ್ರಬ್ಸಿಮ್ರಾನ್ ಸಿಂಗ್ (43) ಮತ್ತು ಕೂಪರ್ (36) ಉಪಯುಕ್ತ ರನ್ ಗಳಿಸಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿ ವಹಿಸಿಕೊಂಡ ನಾಯಕ ಶ್ರೇಯಸ್ ಅಯ್ಯರ್ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ಸಮೀಪ ತಂದರು.
ಅಂತಿಮವಾಗಿ ಶಶಾಂಕ್ ಸಿಂಗ್ ಮತ್ತು ಸ್ಟೊಯಿನಿಸ್ ಜೋಡಿಯು ತಂಡವನ್ನು ಯಾವುದೇ ಆತಂಕವಿಲ್ಲದೆ ಜಯದ ದಡ ಮುಟ್ಟಿಸಿತು. ಈ ಸೋಲಿನೊಂದಿಗೆ ಸಿಎಸ್‌ಕೆ ಈ ಆವೃತ್ತಿಯಲ್ಲಿ ಸತತ ಎರಡನೇ ಸೋಲು ಅನುಭವಿಸಿದಂತಾಗಿದೆ.



