September 30, 2026
Wednesday, September 30, 2026
spot_img

ನಾಸಿಕ್‌ನಲ್ಲಿ ಭೀಕರ ಅಪಘಾತ: ಬಾವಿಗೆ ಬಿದ್ದ ಕಾರು, ಒಂದೇ ಕುಟುಂಬದ 9 ಮಂದಿ ದುರ್ಮರಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದಿಂಡೋರಿ ತಾಲೂಕಿನಲ್ಲಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದು ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.

ನಿಯಂತ್ರಣ ತಪ್ಪಿದ ಮಾರುತಿ XL6 ಕಾರೊಂದು ರಸ್ತೆ ಪಕ್ಕದ ಬಾವಿಗೆ ಉರುಳಿ ಬಿದ್ದ ಪರಿಣಾಮ, ಆರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಒಂಬತ್ತು ಜನರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಇಂದೋರ್ ಗ್ರಾಮದ ದರ್ಗುಡೆ ಕುಟುಂಬದ ಸದಸ್ಯರು ಖಾಸಗಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ದಿಂಡೋರಿ ತಾಲೂಕಿನ ರಸ್ತೆಯಲ್ಲಿ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ವಾಹನವು ನೇರವಾಗಿ ನೀರು ತುಂಬಿದ್ದ ಬಾವಿಗೆ ನುಗ್ಗಿದೆ. ಮೃತರನ್ನು ಸುನಿಲ್ ದರ್ಗುಡೆ, ಅವರ ಪತ್ನಿ ಹಾಗೂ ಮಗಳು ಸೇರಿದಂತೆ ಕುಟುಂಬದ ಇತರ ಸದಸ್ಯರು ಎಂದು ಗುರುತಿಸಲಾಗಿದೆ. ಮೃತಪಟ್ಟ ಆರು ಮಕ್ಕಳಲ್ಲಿ ಏಳು ವರ್ಷದ ಪುಟ್ಟ ಬಾಲಕಿಯೂ ಸೇರಿರುವುದು ನೋವಿನ ಸಂಗತಿ.

ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಮತ್ತು ಪೊಲೀಸರು ರಕ್ಷಣೆಗೆ ಧಾವಿಸಿದರು. ಎನ್‌ಡಿಆರ್‌ಎಫ್ ತಂಡವು ಸ್ಥಳಕ್ಕೆ ಆಗಮಿಸಿ ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿತು. ಅಪಘಾತದ ಸ್ಥಳದಲ್ಲಿ ಹೆಚ್ಚಿನ ಜನಸಂದಣಿ ಸೇರಿದ್ದರಿಂದ ರಕ್ಷಣಾ ಸಿಬ್ಬಂದಿಗೆ ಕಾರ್ಯಾಚರಣೆ ನಡೆಸಲು ಸ್ವಲ್ಪ ಅಡಚಣೆಯಾಯಿತು. ಸದ್ಯ ದಿಂಡೋರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

Must Read