ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮರಾಜನಗರದ ಕೊಳ್ಳೇಗಾಲಕ್ಕೆ ಇಂದು ಸಿಎಂ ಡಿ.ಕೆ. ಶಿವಕುಮಾರ್ ಭೇಟಿ ನೀಡಲಿದ್ದು, ಬರೋಬ್ಬರಿ 1,500 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ನಂತರ ಇದೇ ಮೊದಲ ಬಾರಿಗೆ ಡಿಕೆಶಿ ಅವರು ಚಾಮರಾಜನಗರಕ್ಕೆ ಭೇಟಿ ನೀಡಲಿದ್ದಾರೆ. ಹನೂರು ಹಾಗೂ ಕೊಳ್ಳೇಗಾಲ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಇಂದು 12ಗಂಟೆಗೆ ಹನೂರು ತಾಲೂಕಿನ ಹುಲಸಗುಡ್ಡ ಹೆಲಿಪ್ಯಾಡ್‌ಗೆ ಸಿಎಂ ಬಂದಿಳಿಯಲಿದ್ದು, ಅಲ್ಲಿಂದ 12:20ಕ್ಕೆ ಎಂ.ಜಿ.ಎಸ್.ವಿ. ಕಾಲೇಜು ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ಆಗಮಿಸಲಿದ್ದಾರೆ. ಅಲ್ಲಿ 1,500 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಲಿದ್ದಾರೆ.
ತದನಂತರ ಕೊಳ್ಳೇಗಾಲದಲ್ಲಿ ಜಿಲ್ಲಾಮಟ್ಟದ ಸರ್ಕಾರಿ ಆಸ್ಪತ್ರೆ ಮೊದಲ ಹಂತದ ಕಾಮಗಾರಿ, ಗರ ಮಾಂಬಳ್ಳಿ ಕೆರೆಗಳಿಂದ ಬೆಂಗಳೂರು ದಾಬಸ್‌ಪೇಟೆ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಕೆ, ಮುಡಿಗುಂಡಂ ಸೇತುವೆ, ಯಳಂದೂರು ಸರ್ಕಾರಿ ಪದವಿ ಕಾಲೇಜು ಕಟ್ಟಡ, ಹೊಂಗನೂರು ಹಿರಿಕೆರೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜೊತೆಗೆ 100 ಹಾಸಿಗೆಗಳ ಯಳಂದೂರು ಸರ್ಕಾರಿ ಆಸ್ಪತ್ರೆ, ಕೊಳ್ಳೇಗಾಲದ ಅಂಬೇಡ್ಕರ್ ಭವನ, ಮೆಟ್ರಿಕ್‌ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ಸರ್ಕಾರಿ ಐಟಿಐ ಕಾಲೇಜು ಹೆಚ್ಚುವರಿ ಕೊಠಡಿಗಳು ಮತ್ತಿತರ ಕಾಮಗಾರಿಗಳ ಉದ್ಘಾಟನೆ ಮಾಡಲಿದ್ದಾರೆ.



