April 4, 2026
Saturday, April 4, 2026
spot_img

ಯಾವ ದಿಗ್ಬಂಧನ ಆದ್ರೂ ನಮ್ಮನ್ನ ತಡಿಯೋಕೆ ಸಾಧ್ಯನಾ?: ಯುದ್ಧದ ನಡುವೆಯೂ ಹಾರ್ಮುಜ್ ದಾಟಿದ 8 ಹಡಗುಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಏಷ್ಯಾದಲ್ಲಿ ಇರಾನ್ ಯುದ್ಧದ ಉದ್ವಿಗ್ನತೆ ಮುಂದುವರಿದಿದ್ದರೂ, ಭಾರತದ ಇಂಧನ ಸರಬರಾಜು ಮತ್ತು ಸಮುದ್ರ ಸಂಚಾರದಲ್ಲಿ ಸ್ಥಿರತೆ ಕಾಯ್ದುಕೊಂಡಿರುವ ಮಹತ್ವದ ಬೆಳವಣಿಗೆ ಕಂಡುಬಂದಿದೆ.

ಫೆಬ್ರವರಿ 28ರಿಂದ ಆರಂಭವಾದ ಸಂಘರ್ಷದ ಬಳಿಕ, ಭಾರತದೊಂದಿಗೆ ಸಂಪರ್ಕ ಹೊಂದಿರುವ 8 ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿವೆ ಎಂದು ವರದಿಯಾಗಿದೆ. ಈ ಮೂಲಕ ಯುದ್ಧಪೀಡಿತ ಪ್ರದೇಶದಲ್ಲೂ ಅತಿ ಹೆಚ್ಚು ಹಡಗುಗಳನ್ನು ಈ ಮಾರ್ಗದಿಂದ ಕಳುಹಿಸಿರುವ ದೇಶಗಳಲ್ಲಿ ಭಾರತ ಪ್ರಮುಖ ಸ್ಥಾನದಲ್ಲಿದೆ.

ಜಾಗತಿಕ ತೈಲ ಮತ್ತು ಅನಿಲ ಸಾಗಣೆಯ ಸುಮಾರು 20 ಪ್ರತಿಶತ ಈ ಜಲಮಾರ್ಗದ ಮೂಲಕವೇ ಸಾಗುವುದರಿಂದ, ಹಾರ್ಮುಜ್ ಜಲಸಂಧಿ ವಿಶ್ವದ ಅತ್ಯಂತ ಪ್ರಮುಖ ಕಡಲ ಚೆಕ್ ಪಾಯಿಂಟ್‌ಗಳಲ್ಲಿ ಒಂದಾಗಿದೆ. ಯುದ್ಧದ ನಂತರ ಇರಾನ್ ಹಲವು ದೇಶಗಳಿಗೆ ನಿರ್ಬಂಧ ಹೇರಿದರೂ, ಭಾರತ ಸೇರಿದಂತೆ ತನ್ನ ಸ್ನೇಹ ರಾಷ್ಟ್ರಗಳ ಹಡಗುಗಳಿಗೆ ಮಾರ್ಗವನ್ನು ಮುಕ್ತವಾಗಿರಿಸಿದೆ.

ಇದನ್ನೂ ಓದಿ:

ಇಂದು ಮುಂಜಾನೆ ಎಲ್‌ಪಿಜಿ ಟ್ಯಾಂಕರ್ ಗ್ರೀನ್ ಸಾನ್ವಿ ಈ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಭಾರತತ್ತ ಪ್ರಯಾಣ ಆರಂಭಿಸಿದೆ. ಇದರಿಂದ ಯುದ್ಧದ ನಡುವೆಯೂ ಭಾರತದ ಇಂಧನ ಸರಬರಾಜಿಗೆ ದೊಡ್ಡ ಬಲ ಸಿಕ್ಕಂತಾಗಿದೆ. ಈಗಾಗಲೇ ಶಿವಾಲಿಕ್, ನಂದಾ ದೇವಿ, ಜಗ್ ಲಾಡ್ಕಿ, ಪೈನ್ ಗ್ಯಾಸ್, ಜಗ್ ವಸಂತ, BW ಟೈರ್, BW ಎಲ್ಮ್, ಗ್ರೀನ್ ಸಾನ್ವಿ ಸೇರಿದಂತೆ ಎಂಟು ಹಡಗುಗಳು ಸುರಕ್ಷಿತವಾಗಿ ಮಾರ್ಗ ದಾಟಿವೆ.

ಇನ್ನೊಂದೆಡೆ, ಸುಮಾರು 485 ಭಾರತೀಯ ನಾವಿಕರೊಂದಿಗೆ 15ಕ್ಕೂ ಹೆಚ್ಚು ಭಾರತೀಯ ಧ್ವಜ ಹೊಂದಿರುವ ಹಡಗುಗಳು ಇನ್ನೂ ಗಲ್ಫ್ ಪ್ರದೇಶದಲ್ಲೇ ಉಳಿದಿವೆ. ಇವುಗಳ ಸುರಕ್ಷಿತ ಸಂಚಾರಕ್ಕಾಗಿ ಭಾರತೀಯ ನೌಕಾಪಡೆ ಓಮನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದಲ್ಲಿ ಸಕ್ರಿಯವಾಗಿ ಕಾವಲು ನಿಂತಿದೆ.

ಈ ಬೆಳವಣಿಗೆ ಭಾರತಕ್ಕೆ ಇಂಧನ ಭದ್ರತೆ ದೃಷ್ಟಿಯಿಂದ ಮಹತ್ವದ್ದಾಗಿದ್ದು, ಯುದ್ಧದ ಮಧ್ಯೆಯೂ ಸರಬರಾಜು ಸರಪಳಿ ನಿರಂತರವಾಗಿ ಮುಂದುವರಿಯುತ್ತಿದೆ ಎಂಬ ವಿಶ್ವಾಸ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !