August 26, 2026
Wednesday, August 26, 2026
spot_img

ಜಾಗತಿಕ ಯುದ್ಧದ ಭೀತಿ ನಡುವೆ ಅಕ್ಕಿ ರಫ್ತು ಸ್ಥಗಿತ: ಬಂದರುಗಳಲ್ಲೇ ಸಿಲುಕಿದ 5 ಲಕ್ಷ ಟನ್ ಬಾಸುಮತಿ ರೈಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅಂತಾರಾಷ್ಟ್ರೀಯ ಸಮುದ್ರ ಮಾರ್ಗಗಳಾದ ಬಾಬ್ ಅಲ್-ಮಂದಾಬ್ ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಭಾರಿ ಉದ್ವಿಗ್ನತೆಯಿಂದಾಗಿ ಭಾರತದ ಹೆಮ್ಮೆಯ ಬಾಸುಮತಿ ಅಕ್ಕಿ ರಫ್ತು ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ. ಸಾಗಣೆ ಮಾರ್ಗದಲ್ಲಿನ ಭದ್ರತಾ ಆತಂಕಗಳಿಂದಾಗಿ ಮಧ್ಯಪ್ರಾಚ್ಯ ಮತ್ತು ಯುರೋಪ್ ದೇಶಗಳಿಗೆ ರಫ್ತಾಗಬೇಕಿದ್ದ ಸುಮಾರು 5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಗುಜರಾತ್‌ನ ಮುದ್ರಾ ಮತ್ತು ಕಾಂಡ್ಲಾ ಬಂದರುಗಳಲ್ಲೇ (CFS) ಸಿಲುಕಿಕೊಂಡಿದೆ.

ಇರಾನ್, ಸೌದಿ ಅರೇಬಿಯಾ ಮಾರುಕಟ್ಟೆಗೆ ಭಾರಿ ಹೊಡೆತ

ಭಾರತೀಯ ಬಾಸುಮತಿ ಅಕ್ಕಿಗೆ ಸೌದಿ ಅರೇಬಿಯಾ ಮತ್ತು ಇರಾನ್ ದೇಶಗಳೇ ಅತಿ ದೊಡ್ಡ ಮಾರುಕಟ್ಟೆಗಳಾಗಿವೆ. ಈ ಎರಡು ದೇಶಗಳು ವಾರ್ಷಿಕವಾಗಿ ಭಾರತದಿಂದ ಸುಮಾರು 20 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತವೆ. ಸದ್ಯ ಬಂದರುಗಳಲ್ಲಿ ಸ್ಥಗಿತಗೊಂಡಿರುವ ಒಟ್ಟು 5 ಲಕ್ಷ ಟನ್ ಅಕ್ಕಿಯಲ್ಲಿ, 3 ಲಕ್ಷ ಮೆಟ್ರಿಕ್ ಟನ್ ಬಾಸುಮತಿ ಅಕ್ಕಿ ಕೇವಲ ಇರಾನ್ ದೇಶಕ್ಕೇ ರಫ್ತಾಗಬೇಕಿತ್ತು. ಹೌತಿ ಬಂಡುಕೋರರ ನಿರಂತರ ಎಚ್ಚರಿಕೆ ಮತ್ತು ಹಡಗುಗಳ ಮೇಲಿನ ದಾಳಿಯ ಭೀತಿಯಿಂದಾಗಿ ಜೆಡ್ಡಾ, ಜಿಜಾನ್ ಮತ್ತು ಅಕಾಬಾ ಬಂದರುಗಳ ಮೂಲಕ ಸರಕು ಸಾಗಣೆ ಸಂಪೂರ್ಣ ಕಡಿತಗೊಂಡಿದೆ.

ಹಡಗುಗಳ ಬುಕಿಂಗ್ ರದ್ದು

ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇರಾನ್‌ಗೆ ಹೊರಟಿದ್ದ ಭಾರತದ ಒಂದು ಸರಕು ಹಡಗು ಸಾಗಣೆ ಮಾರ್ಗದ ಅಡೆತಡೆಗಳಿಂದಾಗಿ ಕೇವಲ ಒಂದು ತಿಂಗಳಲ್ಲೇ ವಾಪಸ್ ಜಾಮ್‌ನಗರ್ ಬಂದರಿಗೆ ಮರಳಿದೆ. ಇದರೊಂದಿಗೆ ಇರಾನ್‌ಗೆ ಅಕ್ಕಿ ಸಾಗಿಸಬೇಕಿದ್ದ ಇನ್ನು ಮೂರು ಪ್ರಮುಖ ಹಡಗುಗಳ ಬುಕಿಂಗ್ ಅನ್ನು ಹಡಗು ಮಾಲೀಕರು ಭದ್ರತೆಯ ಕಾರಣ ನೀಡಿ ರದ್ದುಗೊಳಿಸಿದ್ದಾರೆ. ಇದು ರಫ್ತುದಾರರಲ್ಲಿ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಗಗನಕ್ಕೇರಿದ ಸಾರಿಗೆ ವೆಚ್ಚ

ಬಾಸುಮತಿ ಅಕ್ಕಿ ಗಿರಣಿ ಮಾಲೀಕರು ಮತ್ತು ರಫ್ತುದಾರರ ಸಂಘದ ಉಪಾಧ್ಯಕ್ಷ ರಂಜಿತ್ ಸಿಂಗ್ ಜೋಸನ್ ಮತ್ತು ಅಧ್ಯಕ್ಷ ಬಾಲಕೃಷ್ಣ ಬಾಲಿ ಅವರ ಪ್ರಕಾರ, ಈ ಬಿಕ್ಕಟ್ಟು ಕೇವಲ ಸರಕು ವಿಳಂಬಕ್ಕೆ ಸೀಮಿತವಾಗಿಲ್ಲ. ರೆಡ್ ಸೀ ಬಿಕ್ಕಟ್ಟಿನಿಂದಾಗಿ ಹಡಗುಗಳು ಸುದೀರ್ಘ ಪರ್ಯಾಯ ಮಾರ್ಗವನ್ನು ಬಳಸಬೇಕಾಗಿ ಬಂದಿದೆ. ಇದರಿಂದಾಗಿ ಹಡಗು ಸಾರಿಗೆ ದರ ಮತ್ತು ವಿಮಾ ವೆಚ್ಚ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ:

ಆರ್ಥಿಕ ಬಿಕ್ಕಟ್ಟು

ರಫ್ತುದಾರರು ಈಗಾಗಲೇ ಭತ್ತದ ಖರೀದಿ, ಮಿಲ್ಲಿಂಗ್, ಪ್ಯಾಕೇಜಿಂಗ್ ಮತ್ತು ಸಾರಿಗೆಗಾಗಿ ಕೋಟ್ಯಂತರ ರೂ.ಹೂಡಿಕೆ ಮಾಡಿದ್ದಾರೆ. ಆದರೆ ಸರಕು ಬಂದರುಗಳಲ್ಲೇ ಸಿಲುಕಿರುವುದರಿಂದ ದುಡಿಯುವ ಬಂಡವಾಳ ಲಾಕ್ ಆಗಿದೆ. ಬ್ಯಾಂಕುಗಳು ಸಾಲದ ಬಡ್ಡಿ ವಿಧಿಸುತ್ತಿರುವುದರಿಂದ ವರ್ತಕರು ತೀವ್ರ ಆರ್ಥಿಕ ನಷ್ಟದಲ್ಲಿದ್ದಾರೆ.

ಜಾಗತಿಕ ಅಕ್ಕಿ ಮಾರುಕಟ್ಟೆಯಲ್ಲಿ ಭಾರತ ಶೇಕಡಾ 45 ರಷ್ಟು ಪಾಲನ್ನು ಹೊಂದಿದ್ದು, ಪಾಕಿಸ್ತಾನ ಮತ್ತು ಥೈಲ್ಯಾಂಡ್ ದೇಶಗಳೊಂದಿಗೆ ಪೈಪೋಟಿ ನಡೆಸುತ್ತಿದೆ. ಈ ಜಾಗತಿಕ ಹಡಗು ಮಾರ್ಗದ ಬಿಕ್ಕಟ್ಟು ಶೀಘ್ರವೇ ತಿಳಿಯಾಗದಿದ್ದರೆ ಭಾರತದ ಕೃಷಿ ರಫ್ತು ಕ್ಷೇತ್ರಕ್ಕೆ ಮತ್ತಷ್ಟು ದೊಡ್ಡ ಆಘಾತ ಎದುರಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !