ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 8ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಈ ಗುರಿಯನ್ನು ಡೆಲ್ಲಿ 18.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ಬೆನ್ನಟ್ಟಿತು.
ಮುಂಬೈ ಇನ್ನಿಂಗ್ಸ್‌ಗೆ ಆರಂಭದಲ್ಲೇ ಆಘಾತ ಎದುರಾಯಿತು. ವೇಗಿ ಮುಖೇಶ್ ಕುಮಾರ್ ಒಂದೇ ಓವರ್‌ನಲ್ಲಿ ರಯಾನ್ ರಿಕಲ್ಟನ್ ಮತ್ತು ತಿಲಕ್ ವರ್ಮಾ ವಿಕೆಟ್ ಕಿತ್ತು ಒತ್ತಡ ತಂದರು. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ 35 ರನ್ಗಳ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರೆ, ನಾಯಕತ್ವ ವಹಿಸಿದ್ದ ಸೂರ್ಯಕುಮಾರ್ ಯಾದವ್ 51 ರನ್‌ಗಳ ಅರ್ಧಶತಕ ಬಾರಿಸಿ ತಂಡವನ್ನು ಹೋರಾಟದ ಮೊತ್ತದತ್ತ ಕೊಂಡೊಯ್ದರು. ನಮನ್ ಧೀರ್ 28 ರನ್‌ಗಳ ಉಪಯುಕ್ತ ಕೊಡುಗೆ ನೀಡಿದರು.
ಇದನ್ನೂ ಓದಿ:
ಗುರಿ ಬೆನ್ನಟ್ಟಿದ ಡೆಲ್ಲಿಗೂ ಆರಂಭ ಸುಗಮವಾಗಿರಲಿಲ್ಲ. ಕೆಎಲ್ ರಾಹುಲ್ ಕೇವಲ 1 ರನ್‌ಗೆ ಔಟಾದರೆ, ನಿತೀಶ್ ರಾಣಾ ರನೌಟ್ ಆಗಿ ಪೆವಿಲಿಯನ್ ಸೇರಿದರು. ಈ ವೇಳೆ ಪಾಥುಮ್ ನಿಸ್ಸಂಕಾ 44 ರನ್ ಗಳಿಸಿ ತಂಡವನ್ನು ಸ್ಥಿರಪಡಿಸಿದರು.
ಆದರೆ ಪಂದ್ಯವನ್ನು ಸಂಪೂರ್ಣವಾಗಿ ತನ್ನತ್ತ ತಿರುಗಿಸಿದವರು ಸಮೀರ್ ರಿಜ್ವಿ. ಅವರು ಸತತ ಎರಡನೇ ಅರ್ಧಶತಕ ದಾಖಲಿಸಿ, ಕೇವಲ 51 ಎಸೆತಗಳಲ್ಲಿ 90 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಅವರ ಬ್ಯಾಟಿಂಗ್‌ನಲ್ಲಿ 7 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್‌ಗಳು ಸೇರಿದ್ದು, ಮುಂಬೈ ಬೌಲರ್‌ಗಳಿಗೆ ತಲೆನೋವಾಯಿತು.
ಈ ಗೆಲುವಿನೊಂದಿಗೆ ಡೆಲ್ಲಿ ಈ ಸೀಸನ್‌ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿಕೊಂಡರೆ, ಮುಂಬೈ ಇಂಡಿಯನ್ಸ್‌ಗೆ ಇದು ಮೊದಲ ಸೋಲಾಯಿತು.



