April 5, 2026
Sunday, April 5, 2026
spot_img

ನಮ್ಮ ಬೆಂಗಳೂರಲ್ಲಿ ‘ನಮ್ಮ ತಂಡ’ದ ಆರ್ಭಟ: RCB ವೇಗಿಗಳ ಅಬ್ಬರಕ್ಕೆ ನಲುಗುತ್ತಾ CSK ಬ್ಯಾಟಿಂಗ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಇತಿಹಾಸದ ದೈತ್ಯ ಅಭಿಮಾನಿ ಬಳಗವನ್ನು ಹೊಂದಿರುವ ಎರಡು ಬಲಿಷ್ಠ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ. ಈಗಾಗಲೇ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿರುವ ಆರ್‌ಸಿಬಿ ಆತ್ಮವಿಶ್ವಾಸದಲ್ಲಿದ್ದರೆ, ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಸಿಎಸ್‌ಕೆ ತೀವ್ರ ಒತ್ತಡದಲ್ಲಿದೆ.

ಬೌಲಿಂಗ್ ವಿಭಾಗದಲ್ಲಿ ಪ್ರಮುಖ ವೇಗಿಗಳ ಅನುಪಸ್ಥಿತಿಯ ನಡುವೆಯೂ ಆರ್‌ಸಿಬಿ ಬಲಿಷ್ಠವಾಗಿ ಕಾಣುತ್ತಿದೆ. ಜೋಶ್ ಹೇಜಲ್‌ವುಡ್ ಅವರ ಬದಲಿಯಾಗಿ ಬಂದಿರುವ ಜಾಕೋಬ್ ಡಫಿ ತಮ್ಮ ಮಾರಕ ಬೌಲಿಂಗ್ ಮೂಲಕ ಭರವಸೆ ಮೂಡಿಸಿದ್ದಾರೆ. ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಅನುಭವ ತಂಡಕ್ಕೆ ವರದಾನವಾಗಿದ್ದು, ಇಂದು ಅಭಿನಂದನ್ ಸಿಂಗ್ ಅವರ ಬದಲು ಯುವ ವೇಗಿ ಮಂಗೇಶ್ ಯಾದವ್ ಕಣಕ್ಕಿಳಿಯುವ ಸಾಧ್ಯತೆಯಿದೆ.

ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಹಾಗೂ ರಜತ್ ಪಾಟೀದಾರ್ ಅಮೋಘ ಫಾರ್ಮ್‌ನಲ್ಲಿದ್ದಾರೆ. ಆರಂಭಿಕ ಆಟಗಾರ ಫಿಲ್ ಸಾಲ್ಟ್ ಬ್ಯಾಟ್‌ನಿಂದ ದೊಡ್ಡ ಮೊತ್ತ ಬಂದಲ್ಲಿ ಆರ್‌ಸಿಬಿಯ ಬ್ಯಾಟಿಂಗ್ ಶಕ್ತಿ ಮತ್ತಷ್ಟು ಹೆಚ್ಚಲಿದೆ.

ಮತ್ತೊಂದೆಡೆ ಚೆನ್ನೈ ತಂಡದಲ್ಲಿ ಗೊಂದಲದ ಗೂಡು ಎದ್ದಂತಿದೆ. ಎಂ.ಎಸ್. ಧೋನಿ ಅವರ ಅನುಪಸ್ಥಿತಿ ತಂಡವನ್ನು ಕಾಡುತ್ತಿರುವುದರ ಜೊತೆಗೆ, ಬೌಲಿಂಗ್ ಮತ್ತು ಬ್ಯಾಟಿಂಗ್ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ದೊಡ್ಡ ನಿರೀಕ್ಷೆಯೊಂದಿಗೆ ತಂಡಕ್ಕೆ ಬಂದ ಸಂಜು ಸ್ಯಾಮ್ಸನ್ ರನ್ ಗಳಿಸಲು ಪರದಾಡುತ್ತಿರುವುದು ಮ್ಯಾನೇಜ್‌ಮೆಂಟ್‌ಗೆ ತಲೆನೋವಾಗಿದೆ. ಯುವ ಆಟಗಾರ ಆಯುಷ್ ಮ್ಹಾತ್ರೆ ಅವರ ಸ್ಥಿರ ಪ್ರದರ್ಶನವೊಂದೇ ಸದ್ಯ ತಂಡಕ್ಕಿರುವ ಪ್ಲಸ್ ಪಾಯಿಂಟ್.

ಇಂದಿನ ಪಂದ್ಯದಲ್ಲಿ ಸಿಎಸ್‌ಕೆ ಚೇತರಿಸಿಕೊಂಡು ಗೆಲುವಿನ ಖಾತೆ ತೆರೆಯುತ್ತದೆಯೇ ಅಥವಾ ಆರ್‌ಸಿಬಿ ತನ್ನ ಜಯದ ನಾಗಾಲೋಟವನ್ನು ಮುಂದುವರಿಸುತ್ತದೆಯೇ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿ ಮನೆ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !