ಹೊಸದಿಗಂತ ವರದಿ, ಕಲಬುರಗಿ:
ಗ್ರಾಮ ಪಂಚಾಯತ್ ಕೆಲಸಕ್ಕೆ ಲಂಚ ಬೇಡಿಕೆ ಇಟ್ಟಿದ್ದ ಕುಮಸಿ ಗ್ರಾಮದ ಬಿಲ್ ಕಲೆಕ್ಟರ್ ಮಲ್ಲಿಕಾರ್ಜುನರನ್ನು ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಅನೀಲ ಕುಮಾರ ರಾಠೋಡ ಅವರು ನೀಡಿದ ದೂರಿನ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ತಂದೆಯ ಹೆಸರಿನಲ್ಲಿದ್ದ ಜಾಗವನ್ನು ತಾಯಿಯ ಹೆಸರಿಗೆ ಮೊಟೇಶನ್ ಮಾಡಿಕೊಡಲು ಆರೋಪಿಯು ₹4,000 ಲಂಚ ಬೇಡಿಕೆ ಇಟ್ಟಿದ್ದನು. ಇದರಲ್ಲಿ ₹2,000 ಅನ್ನು ಫೋನ್‌ಪೇ ಮೂಲಕ ಸ್ವೀಕರಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಪೊಲೀಸ್ ಅಧೀಕ್ಷಕ ಸಿದ್ಧರಾಜು ಸಿ. ಅವರ ಮಾರ್ಗದರ್ಶನದಲ್ಲಿ, ಇನ್ಸ್‌ಪೆಕ್ಟರ್ ರಾಜಶೇಖರ ಬಡದೆಸಾರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಮುಂದುವರಿದಿದೆ.



