April 7, 2026
Tuesday, April 7, 2026
spot_img

ಅಭಿಷೇಕ್ ಗೆ ರನ್ ಬರ: ಸನ್‌ರೈಸರ್ಸ್ ಹೈದರಾಬಾದ್‌ಗೆ ಹೆಚ್ಚಿದ ‘ಶರ್ಮಾಜಿ’ ಟೆನ್ಶನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

2024ರ ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದ ಅಭಿಷೇಕ್ ಶರ್ಮಾ, 2026ರಲ್ಲಿ ಮಾತ್ರ ನಿರೀಕ್ಷಿತ ಪ್ರದರ್ಶನ ನೀಡಲು ಹೋರಾಟ ನಡೆಸುತ್ತಿದ್ದಾರೆ.

ಕಳೆದ ಕೆಲವು ವಾರಗಳಿಂದ ಟಿ20 ಕ್ರಿಕೆಟ್‌ನಲ್ಲಿ ಅವರ ಬ್ಯಾಟ್ ಮೌನವಾಗಿದ್ದು, ಪದೇ ಪದೇ ಶೂನ್ಯಕ್ಕೆ ಔಟಾಗುತ್ತಿರುವುದು ತಂಡದ ಆತಂಕವನ್ನು ಹೆಚ್ಚಿಸಿದೆ. ವಿಶೇಷವಾಗಿ ಟಿ20 ವಿಶ್ವಕಪ್‌ನಲ್ಲೂ ಮತ್ತು ಈಗ ನಡೆಯುತ್ತಿರುವ ಐಪಿಎಲ್‌ಲ್ಲೂ ಅವರ ಕಳಪೆ ಫಾರ್ಮ್ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ದೊಡ್ಡ ತಲೆನೋವಾಗುತ್ತಿದೆ.

ಕಳೆದ ವರ್ಷ ಐಪಿಎಲ್‌ನಲ್ಲಿ ಅಬ್ಬರಿಸಿದ್ದ ಅಭಿಷೇಕ್, ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಅದೇ ಲಯ ಮುಂದುವರಿಸಿದ್ದರು. ಆದರೆ 2026ರ ಆರಂಭದಿಂದಲೇ ಅವರ ಪ್ರದರ್ಶನದಲ್ಲಿ ಸ್ಪಷ್ಟ ಕುಸಿತ ಕಂಡುಬಂದಿದೆ. ರನ್ ಗಳಿಸುವುದೇ ಕಷ್ಟವಾಗಿರುವುದಲ್ಲದೆ, ಖಾತೆ ತೆರೆಯದೇ ಪೆವಿಲಿಯನ್‌ಗೆ ಮರಳುವ ಘಟನೆಗಳು ಹೆಚ್ಚಾಗಿವೆ.

ಇದನ್ನೂ ಓದಿ:

ಟಿ20 ವಿಶ್ವಕಪ್‌ನಲ್ಲಿ ಸತತ ಮೂರು ಬಾರಿ ಶೂನ್ಯಕ್ಕೆ ಔಟಾಗಿ ಟೀಕೆಗೆ ಗುರಿಯಾಗಿದ್ದ ಅವರು, ಐಪಿಎಲ್‌ನಲ್ಲೂ ಅದೇ ಹಾದಿ ಹಿಡಿದಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲ ಓವರ್‌ನಲ್ಲೇ ಮೊಹಮ್ಮದ್ ಶಮಿ ಬೌಲಿಂಗ್‌ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಆರಂಭಿಕ ಆಟಗಾರನಾಗಿ ತಂಡಕ್ಕೆ ಬಲವಾದ ಸ್ಟಾರ್ಟ್ ನೀಡಬೇಕಾದ ಜವಾಬ್ದಾರಿ ಅವರ ಮೇಲಿದೆ.

ಜನವರಿ 21ರಿಂದ ಏಪ್ರಿಲ್ 5ರವರೆಗೆ ನಡೆದ 75 ದಿನಗಳ ಅವಧಿಯಲ್ಲಿ ಅಭಿಷೇಕ್ ಒಟ್ಟು 14 ಟಿ20 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಆರು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ಅವರು ಎರಡು ಬಾರಿ ಖಾತೆ ತೆರೆಯಲು ವಿಫಲರಾಗಿದ್ದರು. ಈ ಅಂಕಿಅಂಶಗಳು ಅವರ ಫಾರ್ಮ್ ಎಷ್ಟು ಹದಗೆಟ್ಟಿದೆ ಎಂಬುದನ್ನು ತೋರಿಸುತ್ತವೆ.

ಐಪಿಎಲ್ 2026ರಲ್ಲಿ ಇದುವರೆಗೆ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅಭಿಷೇಕ್, 18ರ ಸರಾಸರಿಯಲ್ಲಿ ಕೇವಲ 55 ರನ್ ಗಳಿಸಿದ್ದಾರೆ. ಕೆಕೆಆರ್ ವಿರುದ್ಧ 48 ರನ್ ಗಳಿಸಿ ಸ್ವಲ್ಪ ಭರವಸೆ ಮೂಡಿಸಿದ್ದರೂ, ಆರ್‌ಸಿಬಿ ವಿರುದ್ಧ 7 ರನ್ ಹಾಗೂ ಇತ್ತೀಚಿನ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿರುವುದು ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !