ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್‌ನಲ್ಲಿ ಭರ್ಜರಿ ಆರಂಭ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಈಗ ಗಾಯದ ಆತಂಕ ಎದುರಾಗಿದೆ. ತಂಡದ ಪ್ರಮುಖ ವೇಗದ ಬೌಲರ್, ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಗಾಯದ ಸಮಸ್ಯೆಯಿಂದಾಗಿ ಮುಂಬರುವ ಕನಿಷ್ಠ ಮೂರು ಪ್ರಮುಖ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ 2025-26ರ ಆಶಸ್ ಸರಣಿಯ ವೇಳೆ ಸ್ಟಾರ್ಕ್ ಅವರ ಭುಜ ಮತ್ತು ಮೊಣಕೈಗೆ ಗಂಭೀರ ಪೆಟ್ಟಾಗಿತ್ತು. ಈ ನೋವಿನಿಂದ ಅವರು ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಪ್ರಸ್ತುತ ಆಸ್ಟ್ರೇಲಿಯಾದಲ್ಲೇ ಉಳಿದುಕೊಂಡಿರುವ ಅವರು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಪೂರ್ಣ ಫಿಟ್ನೆಸ್ ಸಾಬೀತುಪಡಿಸುವವರೆಗೆ ಅವರು ಮೈದಾನಕ್ಕಿಳಿಯುವುದು ಅನುಮಾನ ಎನ್ನಲಾಗುತ್ತಿದೆ.
ಸ್ಟಾರ್ಕ್ ಅಲಭ್ಯತೆಯಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲಿಂಗ್ ವಿಭಾಗದಲ್ಲಿ ಸಣ್ಣಮಟ್ಟದ ಬದಲಾವಣೆ ಅನಿವಾರ್ಯವಾಗಿದೆ. ಅವರು ಈ ಕೆಳಗಿನ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ:
ಏಪ್ರಿಲ್ 8: ಗುಜರಾತ್ ಟೈಟಾನ್ಸ್ ವಿರುದ್ಧ
ಏಪ್ರಿಲ್ 11: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ
ಏಪ್ರಿಲ್ 18: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ
ಒಂದು ವೇಳೆ ಚಿಕಿತ್ಸೆಗೆ ಸ್ಪಂದಿಸಿ ಚೇತರಿಸಿಕೊಂಡರೆ ಮಾತ್ರ ಏಪ್ರಿಲ್ 21 ರಂದು ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ಅವರು ಲಭ್ಯವಾಗುವ ಸಾಧ್ಯತೆಯಿದೆ.
ಸ್ಟಾರ್ಕ್ ಅಲಭ್ಯತೆಯ ನಡುವೆಯೂ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಅದ್ಭುತ ಲಯದಲ್ಲಿದೆ. ಈಗಾಗಲೇ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಮಣಿಸಿರುವ ಡೆಲ್ಲಿ 4 ಅಂಕಗಳೊಂದಿಗೆ ಬೀಗುತ್ತಿದೆ. ಪ್ರಸ್ತುತ ಮುಖೇಶ್ ಕುಮಾರ್, ಟಿ. ನಟರಾಜನ್ ಮತ್ತು ಲುಂಗಿ ಎನ್ಗಿಡಿ ವೇಗದ ವಿಭಾಗವನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಒಂದು ವೇಳೆ ಸ್ಟಾರ್ಕ್ ತಂಡ ಕೂಡಿಕೊಂಡರೆ ಡೆಲ್ಲಿಯ ಬೌಲಿಂಗ್ ಪಡೆ ಮತ್ತಷ್ಟು ಮಾರಕವಾಗುವುದರಲ್ಲಿ ಸಂಶಯವಿಲ್ಲ.



