October 10, 2026
Saturday, October 10, 2026
spot_img

ಗುರುಪುರ ಹೆದ್ದಾರಿಯಲ್ಲಿ ಬಸ್-ಲಾರಿ ಮುಖಾಮುಖಿ ಡಿಕ್ಕಿ: ಚಾಲಕರಿಬ್ಬರಿಗೆ ಗಂಭೀರ ಗಾಯ

ಹೊಸದಿಗಂತ ವರದಿ, ಕೈಕಂಬ:

ಮಂಗಳೂರು-ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಪೇಟೆ ಮತ್ತು ಪೊಳಲಿ ದ್ವಾರದ ಮಧ್ಯೆ ಬೆಳ್ಳಿಬೆಟ್ಟು ಬಸ್ ನಿಲ್ದಾಣದ ಮುಂಭಾಗ ಲಾರಿ ಮತ್ತು ಖಾಸಗಿ ಬಸ್ ನಡುವೆ ಭೀಕರ ಮುಖಾಮುಖಿ ಅಪಘಾತ ಬುಧವಾರ ಮಧ್ಯಾಹ್ನ ನಡೆದಿದ್ದು ಎರಡೂ ವಾಹನಗಳ ಚಾಲಕರು ಗಂಭೀರ ಗಾಯಗೊಂಡಿದ್ದಾರೆ.

ಮಂಗಳೂರಿನಿಂದ ಕಾರ್ಕಳದತ್ತ ಸಾಗುತ್ತಿದ್ದ ಖಾಸಗಿ ಬಸ್ ಮತ್ತು ಮಂಗಳೂರು ಕಡೆಗೆ ಹೋಗುತ್ತಿದ್ದ 16 ಚಕ್ರದ ಬೃಹತ್ ಲಾರಿಯು ಬೆಳ್ಳಿಬೆಟ್ಟು ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬಸ್ಸು ಮತ್ತು ಲಾರಿಯ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳ ಚಾಲಕರು ಹೊರಬರಲಾಗದೆ ನರಳಾಡುತ್ತಿದ್ದು, ಸ್ಥಳೀಯರು ಗ್ಯಾಸ್ ಕಟ್ಟರ್ ಮೂಲಕ ಲಾರಿ ಮತ್ತು ಬಸ್ಸಿನ ಕೆಲವು ಭಾಗಗಳನ್ನು ಕತ್ತರಿಸಿ ಗಾಯಾಳುಗಳನ್ನು ಹೊರಗೆ ತೆಗೆದಿದ್ದಾರೆ. ಇಬ್ಬರ ಕಾಲುಗಳು ಮುರಿತಕ್ಕೊಳಗಾಗಿ ತೀವ್ರ ರಕ್ತಸಿಕ್ತಗೊಂಡಿದ್ದು ಬಸ್ಸಿನಲ್ಲಿದ್ದ ಪ್ರಯಾಣಿಕರಲ್ಲಿ ಐದು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬಸ್ಸಿನಲ್ಲಿ 6 ಲಕ್ಷ ನಗದು ಪತ್ತೆ
ಚಾಲಕರನ್ನು ರಕ್ಷಿಸಲು ನಡೆಸಿದ ತುರ್ತು ಕಾರ್ಯಾಚರಣೆಯಲ್ಲಿ ಸ್ಥಳೀಯರಾದ ರಫೀಕ್, ಶಿವರಾಮ, ರವೂಫ್, ಫಾಝಿಲ್ ಮತ್ತಿತರರು ಸಹಕರಿಸಿದ್ದಾರೆ. ಗುರುಪುರದ ಸೇವಾ ಬ್ರಿಗೇಡ್ ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಗ್ಯಾಸ್ ಕಟ್ಟರ್ ಮೂಲಕ ಬಸ್‍ನ ಒಂದು ಭಾಗ ಕತ್ತರಿಸುವ ಸಂಧರ್ಭ ಅಂದಾಜು 6 ಲಕ್ಷ ರೂ ಮೊತ್ತದ ನಗದಿನ ಬಂಡಲ್ ಪತ್ತೆಯಾಗಿದ್ದು, ರಫೀಕ್ ಗುರುಪುರ ನಗದನ್ನು ಸ್ಥಳದಲ್ಲಿ ಇದ್ದ ಬಜ್ಪೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ಬಜಪೆ ಪೊಲೀಸ್ ಮೂಲಗಳು ದೃಢಪಡಿಸಿವೆ. ಬಜಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Must Read