ನಮ್ಮ ಜೀವನಕ್ಕೆ ಹಲವರು ಬರುತ್ತಾರೆ. ಕೆಲವರು ಬಹಳ ದಿನ ಉಳಿಯುತ್ತಾರೆ, ಕೆಲವರು ಕೆಲವು ಕ್ಷಣಗಳಷ್ಟೇ. ಆದರೆ ಎಲ್ಲರೂ ನಮ್ಮ ಜೊತೆಗೆ ಸದಾ ಇರೋಕೆ ಬರುತ್ತಾರೆ ಅನ್ನೋದಿಲ್ಲ. ಕೆಲವರು ಕೇವಲ ಒಂದು ಪಾಠ ಕಲಿಸಿ, ನಮ್ಮ ಜೀವನದಿಂದ ದೂರವಾಗಲು ಮಾತ್ರ ಬರುತ್ತಾರೆ.
ಆ ಸಮಯದಲ್ಲಿ ನಮಗೆ ಅದು ಅರ್ಥವಾಗೋದಿಲ್ಲ. ಅವರು ತುಂಬಾ ಹತ್ತಿರವಾದವರಂತೆ, ಜೀವನದ ಭಾಗವಾದವರಂತೆ ಅನಿಸುತ್ತದೆ. ಆದರೆ ಸಮಯ ಕಳೆಯುತ್ತಾ ಹೋದಂತೆ, ಅವರ ಪಾತ್ರ ನಮ್ಮ ಜೀವನದಲ್ಲಿ ಶಾಶ್ವತವಾಗಿರಲಿಲ್ಲ ಅನ್ನೋದು ಗೊತ್ತಾಗುತ್ತದೆ. ಅವರು ಉಳಿದದ್ದು ವ್ಯಕ್ತಿಯಾಗಿ ಅಲ್ಲ… ಒಂದು ಅನುಭವವಾಗಿ, ಒಂದು ಪಾಠವಾಗಿ.
ಕೆಲವರು ನಮಗೆ ಯಾರನ್ನು ನಂಬಬೇಕು ಅನ್ನೋದು ಕಲಿಸುತ್ತಾರೆ. ಕೆಲವರು ನಮ್ಮ ಮೌಲ್ಯ ಅರಿಯಲು ಕಾರಣವಾಗುತ್ತಾರೆ. ಇನ್ನೂ ಕೆಲವರು ಯಾರನ್ನೂ ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳಬಾರದು ಅನ್ನೋದನ್ನ ಕಲಿಸುತ್ತಾರೆ. ಅಂದರೆ ಅವರು ಕೆಟ್ಟವರು ಅಂತಲ್ಲ; ಅವರ ಪಾತ್ರ ನಮ್ಮ ಜೀವನದಲ್ಲಿ ಒಂದು ಪಾಠದಷ್ಟೇ.
ಇದನ್ನೂ ಓದಿ:
ಪ್ರತಿಯೊಬ್ಬರನ್ನೂ ಮನಸ್ಸಿಗೆ ತುಂಬಾ ಹತ್ತಿರ ಮಾಡಿಕೊಳ್ಳೋದರಿಂದ, ಅವರು ದೂರವಾದಾಗ ನೋವು ಹೆಚ್ಚು. ಅದಕ್ಕೇ ಕೆಲ ಸಂಬಂಧಗಳನ್ನು ಅನುಭವವಾಗಿ ಸ್ವೀಕರಿಸಬೇಕು, ಶಾಶ್ವತ ನಿರೀಕ್ಷೆಯಾಗಿ ಅಲ್ಲ.
ಜೀವನದಲ್ಲಿ ಬರುವ ಪ್ರತಿಯೊಬ್ಬರೂ ಉಳಿಯೋದಿಲ್ಲ. ಕೆಲವರು ನಮ್ಮ ಜೊತೆ ನಡೆದು ಹೋಗುತ್ತಾರೆ, ಕೆಲವರು ದಾರಿ ತೋರಿಸಿ ಹೋಗುತ್ತಾರೆ. ಹೀಗಾಗಿ ಅಂಥವರನ್ನು ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳದೇ, ಅವರು ಕಲಿಸಿದ ಪಾಠವನ್ನು ಮಾತ್ರ ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಉತ್ತಮ.



