ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವೇ ವರ್ಷಗಳ ಹಿಂದೆ ವಿಶ್ವ ಕ್ರಿಕೆಟ್‌ನ ‘ಫ್ಯಾಬ್ ಫೋರ್’ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಜೊತೆಗೆ ಬಾಬರ್ ಆಝಂ ಹೆಸರನ್ನು ತಳುಕು ಹಾಕಲಾಗುತ್ತಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಕೊಹ್ಲಿ ಟಿ20 ಮಾದರಿಯಿಂದ ನಿವೃತ್ತಿ ಹೊಂದಿದ್ದರೂ ಶ್ರೇಷ್ಠತೆಯ ಪಟ್ಟಿಯಲ್ಲಿ ಅಜೇಯರಾಗಿ ಉಳಿದಿದ್ದಾರೆ. ಆದರೆ, ಸತತ ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಬಾಬರ್ ಆಝಂ ಅವರಿಗೆ ಪಾಕಿಸ್ತಾನ ತಂಡದಲ್ಲಿ ಸ್ಥಾನ ಪಡೆಯುವುದೇ ಈಗ ಸವಾಲಾಗಿ ಪರಿಣಮಿಸಿದೆ.
ಪ್ರಸ್ತುತ ಪಾಕಿಸ್ತಾನದಲ್ಲಿ ಪಿಎಸ್ಎಲ್ ಟೂರ್ನಿ ನಡೆಯುತ್ತಿದ್ದು, ಬಾಬರ್ ಆಝಂ ಪೇಶಾವರ್ ಝಲ್ಮಿ ತಂಡದ ನಾಯಕತ್ವ ವಹಿಸಿದ್ದಾರೆ. ಇತ್ತೀಚೆಗೆ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಪೇಶಾವರ್ ತಂಡಕ್ಕೆ 145 ರನ್‌ಗಳ ಸುಲಭ ಗುರಿಯಿತ್ತು. ಆರಂಭಿಕನಾಗಿ ಕಣಕ್ಕಿಳಿದ ಬಾಬರ್ 37 ಎಸೆತಗಳಲ್ಲಿ 43 ರನ್ ಗಳಿಸಿ ತಂಡವನ್ನು ಗೆಲುವಿನ ಸಮೀಪ ತಂದರಾದರೂ, ಪಂದ್ಯ ಮುಗಿಸುವ ಮೊದಲೇ (15ನೇ ಓವರ್‌ನಲ್ಲಿ) ಔಟಾದರು. ತಂಡ ಹೇಗೋ ಕಷ್ಟಪಟ್ಟು ಗೆದ್ದಿತಾದರೂ, ಬಾಬರ್ ಅವರ ‘ಫಿನಿಶಿಂಗ್’ ಸಾಮರ್ಥ್ಯದ ಮೇಲೆ ಪ್ರಶ್ನೆಗಳು ಎದ್ದವು.
ಪಂದ್ಯದ ನಂತರದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಬಾಬರ್ ಅವರ ದೌರ್ಬಲ್ಯವನ್ನು ವಿರಾಟ್ ಕೊಹ್ಲಿಗೆ ಹೋಲಿಸಿ ಚುಚ್ಚಿದರು.
“ವಿರಾಟ್ ಕೊಹ್ಲಿ ಕೂಡ ನಿಮ್ಮಂತೆಯೇ ಆರಂಭಿಕರಾಗಿ ಬರುತ್ತಾರೆ, ಆದರೆ ಪಂದ್ಯ ಮುಗಿಸಿದ ಮೇಲೆಯೇ ಡಗೌಟ್‌ಗೆ ಮರಳುತ್ತಾರೆ. ನಿಮಗೆ ಇದು ಯಾಕೆ ಸಾಧ್ಯವಾಗುತ್ತಿಲ್ಲ? ಹೀಗಿದ್ದೂ ಜನ ನಿಮ್ಮನ್ನು ಕೊಹ್ಲಿಗೆ ಹೋಲಿಸುತ್ತಾರಲ್ಲ, ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎಂದು ನೇರವಾಗಿಯೇ ಪ್ರಶ್ನಿಸಿದರು.
ಈ ಪ್ರಶ್ನೆಯಿಂದ ಅಕ್ಷರಶಃ ಕೆಂಡಾಮಂಡಲವಾದ ಬಾಬರ್ ಆಝಂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. “ಇಂತಹ ಪ್ರಶ್ನೆಗಳನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ. ನನ್ನನ್ನು ಬೇರೆಯವರ ಜೊತೆ ಹೋಲಿಸುವುದನ್ನು ಮೊದಲು ನಿಲ್ಲಿಸಿ. ನಾನು ಪಂದ್ಯಗಳನ್ನು ಗೆಲ್ಲಿಸಿಕೊಡುವುದಿಲ್ಲ ಎಂಬುದು ನಿಮ್ಮ ತಪ್ಪು ಕಲ್ಪನೆ. ನಾನು ಯಾವಾಗಲೂ ತಂಡವನ್ನು ಗೆಲುವಿನ ದಡ ಸೇರಿಸಲು ಶ್ರಮಿಸುತ್ತೇನೆ ಮತ್ತು ಈ ಹಿಂದೆ ಹಲವು ಬಾರಿ ಅಂತಹ ಇನ್ನಿಂಗ್ಸ್ ಆಡಿದ್ದೇನೆ,” ಎಂದು ಖಾರವಾಗಿ ಉತ್ತರಿಸಿದ್ದಾರೆ.
ಸದ್ಯ ಬಾಬರ್ ಅವರ ಈ ಆಕ್ರೋಶದ ವಿಡಿಯೋ ಮತ್ತು ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.



