September 28, 2026
Monday, September 28, 2026
spot_img

ಅಸ್ಸಾಂ, ಕೇರಳ, ಪುದುಚೇರಿಯಲ್ಲಿ ಮತದಾನ ಮುಕ್ತಾಯ: ನಾಯಕರ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ, ಅಸ್ಸಾಂ ಹಾಗೂ ಪುದುಚೇರಿ ವಿಧಾನಸಭೆ ಚುನಾವಣೆಗಳ ಮತದಾನ ಪ್ರಕ್ರಿಯೆ ಇಂದು ಮುಕ್ತಾಯಗೊಂಡಿದ್ದು, ಮತದಾರರು ಉತ್ಸಾಹದಿಂದ ಭಾಗವಹಿಸಿದ್ದಾರೆ. ಸಂಜೆ 5 ಗಂಟೆಯ ಹೊತ್ತಿಗೆ ಲಭ್ಯವಾದ ಅಂಕಿಅಂಶಗಳ ಪ್ರಕಾರ, ಪುದುಚೇರಿಯಲ್ಲಿ ಅತಿ ಹೆಚ್ಚು ಅಂದರೆ ಶೇ. 86.92, ಅಸ್ಸಾಂನಲ್ಲಿ ಶೇ. 84.42 ಮತ್ತು ಕೇರಳದಲ್ಲಿ ಶೇ. 75 ರಷ್ಟು ಮತದಾನವಾಗಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಣ್ಣೂರಿನ ಆರ್‌ಸಿ ಅಮಲ ಶಾಲೆಯಲ್ಲಿ ಮತ ಚಲಾಯಿಸಿದರೆ, ಇತ್ತ ಪುದುಚೇರಿ ಸಿಎಂ ಎನ್. ರಂಗಸಾಮಿ ಅವರು ಸರಳವಾಗಿ ಮೋಟಾರ್ ಸೈಕಲ್ ಮೇಲೆ ಬಂದು ಮತ ಹಾಕುವ ಮೂಲಕ ಎಲ್ಲರ ಗಮನ ಸೆಳೆದರು. ಅಸ್ಸಾಂನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಮತ ಚಲಾಯಿಸಿದರು. ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ದಿಬ್ರುಗಢದಲ್ಲಿ ಮತ ಹಾಕಿ, ಈ ಬಾರಿ ನೂರು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನೊಂದೆಡೆ ಪಶ್ಚಿಮ ಬಂಗಾಳದ ಹಲ್ದಿಯಾದಲ್ಲಿ ಚುನಾವಣಾ ರ‍್ಯಾಲಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ತೃಣಮೂಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. “ಟಿಎಂಸಿ ಸರ್ಕಾರದ ಭ್ರಷ್ಟಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಫೈಲ್‌ಗಳನ್ನು ನಾವು ಮತ್ತೆ ತೆರೆಯಲಿದ್ದೇವೆ. ಅಕ್ರಮ ಎಸಗಿದವರು ಜೈಲು ಸೇರುವುದು ಗ್ಯಾರಂಟಿ,” ಎಂದು ಎಚ್ಚರಿಸಿದರು. ಅಲ್ಲದೆ, ನುಸುಳುಕೋರರನ್ನು ದೇಶದಿಂದ ಹೊರಹಾಕಲಾಗುವುದು ಮತ್ತು ಬಿಜೆಪಿ ಅಧಿಕಾರಕ್ಕೆ ಬಂದರೆ 7ನೇ ವೇತನ ಆಯೋಗ ಜಾರಿಗೆ ತರುವುದಾಗಿ ಭರವಸೆ ನೀಡಿದರು.

Must Read