ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇವಲ ಎಂಟು ಸೆಕೆಂಡುಗಳಲ್ಲಿ ಇಡೀ ಪರ್ವತವೇ ಕುಸಿದುಬಿದ್ದ ಘಟನೆ ನೇಪಾಳದಲ್ಲಿ ನಡೆದಿದೆ.
ಹೌದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಜನ ನಡೆದಾಡುವ ಗಟ್ಟಿಯಾದ ಭೂಮಿಯಿಂದ ಕಾಣುತ್ತಿದ್ದ ಜಾಗ ಎಂಟು ಸೆಕೆಂಡುಗಳಲ್ಲಿ ಕುಸಿದುಬಿದ್ದಿದೆ. ತಾವು ನಿಂತಿರುವ ಭೂಮಿಯೇ ಅಸುರಕ್ಷಿತ ಎಂದು ತಿಳಿದ ಜನ ಕಕ್ಕಾಬಿಕ್ಕಿಯಾಗಿ ಓಡಿದ್ದಾರೆ.
ನೇಪಾಳದಲ್ಲಿ ಕಳೆದ ಕೆಲ ದಿನಗಳಿಂದ ಮತ್ತೆ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ್ದು, ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ. ಧಾರಾಕಾರ ಮಳೆಯಿಂದ ದೇಶದ ಹಲವೆಡೆ ವ್ಯಾಪಕ ಪ್ರವಾಹ ಉಂಟಾಗಿದ್ದು, ಮನೆಗಳು ಹಾನಿಗೊಳಗಾಗಿವೆ. ರಸ್ತೆ ಸಂಚಾರಕ್ಕೂ ತೀವ್ರ ಅಡಚಣೆ ಉಂಟಾಗಿದೆ.
ಶನಿವಾರ ರಾತ್ರಿ ಪಾಲ್ಪಾ ಜಿಲ್ಲೆಯ ಮಠಗಢಿ ಗ್ರಾಮೀಣ ಪುರಸಭೆ ವ್ಯಾಪ್ತಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಐವರು ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ಅವರ ಮೃತದೇಹಗಳನ್ನ ಹೊರತೆಗೆಯಲಾಗಿದೆ. ಇದರೊಂದಿಗೆ ಕಳೆದ 4 ದಿನಗಳಲ್ಲಿ ಪ್ರವಾಹ, ಭೂಕುಸಿತ ಹಾಗೂ ಸಿಡಿಲು ಸೇರಿದಂತೆ ವಿವಿಧ ಮಳೆ ಸಂಬಂಧಿತ ಘಟನೆಗಳಲ್ಲಿ 16 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಇತ್ತೀಚಿನ ಹವಾಮಾನ ವೈಪರೀತ್ಯದಿಂದ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.



