September 16, 2026
Wednesday, September 16, 2026
spot_img

ಗೆಲುವಿನ ಅಮಲಿನಲ್ಲಿರೋ ರಾಜಸ್ಥಾನ್‌ಗೆ ಶಾಕ್: ಡಗೌಟ್‌ನಲ್ಲಿ ಮೊಬೈಲ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆರ್‌ಸಿಬಿ ವಿರುದ್ಧದ ಭರ್ಜರಿ ಗೆಲುವಿನ ಖುಷಿಯಲ್ಲಿ ತೇಲುತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಇದೀಗ ಹೊಸ ವಿವಾದ ತಲೆದೋರಿದೆ. ಪಂದ್ಯ ವೇಳೆ ಡಗೌಟ್‌ನಲ್ಲಿ ತಂಡದ ಸಹಾಯಕ ಸಿಬ್ಬಂದಿಯೊಬ್ಬರು ಮೊಬೈಲ್ ಫೋನ್ ಬಳಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಸಿಸಿಐ ಕ್ರಮ ಕೈಗೊಳ್ಳುವ ಸಾಧ್ಯತೆ ಬಗ್ಗೆ ಚರ್ಚೆ ಶುರುವಾಗಿದೆ.

ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 202 ರನ್‌ಗಳ ಕಠಿಣ ಗುರಿಯನ್ನು ಕೇವಲ 18 ಓವರ್‌ಗಳಲ್ಲಿ ಬೆನ್ನಟ್ಟಿ 6 ವಿಕೆಟ್‌ಗಳ ಗೆಲುವು ಸಾಧಿಸಿತ್ತು. 15 ವರ್ಷದ ವೈಭವ್ ಸೂರ್ಯವಂಶಿ ಸ್ಫೋಟಕ 78 ರನ್ ಗಳಿಸಿದರೆ, ಧ್ರುವ್ ಜುರೆಲ್ ಅಜೇಯ 81 ರನ್ ಸಿಡಿಸಿ ತಂಡದ ಗೆಲುವಿಗೆ ಬೆನ್ನೆಲುಬಾಗಿದ್ದರು.

ಇದನ್ನೂ ಓದಿ:

ಆದರೆ ಈ ಗೆಲುವಿನ ನಂತರ ಮತ್ತೊಂದು ವಿಷಯ ಎಲ್ಲರ ಗಮನ ಸೆಳೆದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ವೈಭವ್ ಸೂರ್ಯವಂಶಿ ಪಕ್ಕದಲ್ಲಿ ಕುಳಿತಿದ್ದ ತಂಡದ ಸಿಬ್ಬಂದಿಯೊಬ್ಬರು ಮೊಬೈಲ್ ಬಳಸುತ್ತಿರುವುದು ಸ್ಪಷ್ಟವಾಗಿ ಕಾಣಿಸಿದೆ. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಆರಂಭವಾಗಿದೆ.

ಐಪಿಎಲ್ ಭ್ರಷ್ಟಾಚಾರ ತಡೆ ಮಾರ್ಗಸೂಚಿಗಳ ಪ್ರಕಾರ, ಡಗೌಟ್ ಮತ್ತು ಡ್ರೆಸ್ಸಿಂಗ್ ರೂಮ್ ಪ್ರದೇಶದಲ್ಲಿ ಆಟಗಾರರು ಹಾಗೂ ಸಿಬ್ಬಂದಿಗೆ ಮೊಬೈಲ್ ಫೋನ್ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಈ ನಿಯಮ ಉಲ್ಲಂಘನೆಯ ಆರೋಪ ಸಾಬೀತಾದರೆ, ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಬಿಸಿಸಿಐ ಶಿಸ್ತುಕ್ರಮ ಜರುಗಿಸುವ ಸಾಧ್ಯತೆ ಇದೆ. ಗೆಲುವಿನ ಸಂತಸದ ನಡುವೆ ಈ ವಿವಾದ ಈಗ ತಂಡಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !