ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 19ನೇ ಆವೃತ್ತಿಯಲ್ಲಿ ಸತತ ಮೂರು ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್, ಸಂಜು ಸ್ಯಾಮ್ಸನ್ ಅವರ ಮನಮೋಹಕ ಶತಕ ಹಾಗೂ ಜೇಮೀ ಓವರ್ಟನ್ ಅವರ ನಿಖರ ಬೌಲಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 23 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಸಿಎಸ್‌ಕೆ ಗೆಲುವಿನ ಖಾತೆ ತೆರೆದಿದೆ.
ತವರು ಮೈದಾನವಾದ ಚೆಪಾಕ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡಕ್ಕೆ ಸಂಜು ಸ್ಯಾಮ್ಸನ್ ಆಸರೆಯಾದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ಸ್ಯಾಮ್ಸನ್ ಭರ್ಜರಿ ಶತಕ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಡೆಲ್ಲಿಗೆ ಗೆಲ್ಲಲು 213 ರನ್‌ಗಳ ಬೃಹತ್ ಗುರಿ ನೀಡಲಾಯಿತು.
ದೊಡ್ಡ ಮೊತ್ತ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಪಥುಮ್ ನಿಸ್ಸಾಂಕ ಮತ್ತು ಕೆ.ಎಲ್. ರಾಹುಲ್ ಮೊದಲ 5 ಓವರ್‌ಗಳಲ್ಲಿ 61 ರನ್ ಕಲೆಹಾಕಿ ಸ್ಫೋಟಕ ಆರಂಭ ನೀಡಿದರು. ಆದರೆ 18 ರನ್ ಗಳಿಸಿದ್ದ ರಾಹುಲ್ ವಿಕೆಟ್ ಒಪ್ಪಿಸುತ್ತಿದ್ದಂತೆ ಡೆಲ್ಲಿಗೆ ಗ್ರಹಣ ಹಿಡಿಯಿತು. ಸಮೀರ್ ರಿಜ್ವಿ, ಡೇವಿಡ್ ಮಿಲ್ಲರ್ ಹಾಗೂ ಅಕ್ಷರ್ ಪಟೇಲ್ ಅಲ್ಪ ಮೊತ್ತಕ್ಕೆ ಔಟಾಗಿ ನಿರಾಸೆ ಮೂಡಿಸಿದರು.
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಟ್ರಿಸ್ಟನ್ ಸ್ಟಬ್ಸ್ ಏಕಾಂಗಿ ಹೋರಾಟ ನಡೆಸಿದರು. 38 ಎಸೆತಗಳಲ್ಲಿ 60 ರನ್ (3 ಸಿಕ್ಸರ್, 4 ಬೌಂಡರಿ) ಸಿಡಿಸಿ ಜಯದ ಆಸೆ ಮೂಡಿಸಿದ್ದರು. ಆದರೆ ಪಂದ್ಯದ ಕೊನೆಯ ಹಂತದಲ್ಲಿ (10 ಎಸೆತಗಳಲ್ಲಿ 30 ರನ್ ಬೇಕಿದ್ದಾಗ) ದೊಡ್ಡ ಹೊಡೆತಕ್ಕೆ ಕೈಹಾಕಿ ಸ್ಟಬ್ಸ್ ಔಟಾಗುವುದರೊಂದಿಗೆ ಡೆಲ್ಲಿಯ ಗೆಲುವಿನ ಕನಸು ಭಗ್ನಗೊಂಡಿತು.



