April 12, 2026
Sunday, April 12, 2026
spot_img

ಡ್ರ್ಯಾಗನ್ ರಾಷ್ಟ್ರಕ್ಕೆ ಟ್ರಂಪ್ ವಾರ್ನಿಂಗ್: ಮೂರನೇ ಮಹಾಯುದ್ಧದ ಮುನ್ಸೂಚನೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕ ರಾಜಕೀಯದ ಚದುರಂಗದಾಟ ಈಗ ಸ್ಫೋಟಕ ಹಂತಕ್ಕೆ ತಲುಪಿದೆ. ಇರಾನ್ ಬೆನ್ನಿಗೆ ನಿಂತಿರುವ ಚೀನಾಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಕಠಿಣ ಎಚ್ಚರಿಕೆ, ಜಗತ್ತನ್ನು ಮೂರನೇ ಮಹಾಯುದ್ಧದ ಭೀತಿಯ ಅಂಚಿಗೆ ತಂದು ನಿಲ್ಲಿಸಿದೆ. “ಷಿ ಜಿನ್ ಫಿಂಗ್ ಅವರೇ, ಇರಾನ್ ಕುಮ್ಮಕ್ಕು ನೀಡುವುದನ್ನು ನಿಲ್ಲಿಸಿ, ಇಲ್ಲದಿದ್ದರೆ ಊಹಿಸಲಾಗದ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಟ್ರಂಪ್ ನೇರವಾಗಿಯೇ ಗುಡುಗಿದ್ದಾರೆ.

ಇರಾನ್‌ಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಹಾಗೂ ವಾಯು ರಕ್ಷಣಾ ವ್ಯವಸ್ಥೆಗಳನ್ನು ನೀಡುತ್ತಿರುವ ಚೀನಾದ ಕ್ರಮವನ್ನು ಟ್ರಂಪ್ ಖಂಡಿಸಿದ್ದಾರೆ.

ಹಾರ್ಮುಜ್ ಜಲಸಂಧಿಯಲ್ಲಿ ನೆಲಬಾಂಬ್ ಅಳವಡಿಸಿ ಜಾಗತಿಕ ತೈಲ ಸಾರಿಗೆಗೆ ಅಡ್ಡಿಪಡಿಸುವ ಇರಾನ್ ಪ್ರಯತ್ನವನ್ನು ಅಮೆರಿಕ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇರಾನ್ ರಾಜಿಗೆ ಬರದಿದ್ದರೆ ಅದನ್ನು ಸಂಪೂರ್ಣವಾಗಿ ನಾಶಪಡಿಸುವುದಾಗಿ ಅಮೆರಿಕ ಎಚ್ಚರಿಸಿದೆ.

ಅಮೆರಿಕದ ಯುದ್ಧ ವಿಮಾನಗಳ ನಿಖರ ಮಾಹಿತಿಯನ್ನು ಚೀನಾ ಇರಾನ್‌ಗೆ ಸೋರಿಕೆ ಮಾಡುತ್ತಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಚೀನಾದ ತಂತ್ರಜ್ಞಾನದ ನೆರವಿನಿಂದಲೇ ಇರಾನ್ ಇತ್ತೀಚೆಗೆ ಅಮೆರಿಕದ ಎಫ್-15 ಇ ಫೈಟರ್ ಜೆಟ್ ಹಾಗೂ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ, ರಾಕೆಟ್ ಇಂಧನಕ್ಕೆ ಬಳಸುವ ‘ಸೋಡಿಯಂ ಪರ್ಕ್ಲೋರೇಟ್’ ಅನ್ನು ಚೀನಾ ರಹಸ್ಯವಾಗಿ ಇರಾನ್‌ಗೆ ರವಾನಿಸಿರುವುದು ಸಂಘರ್ಷಕ್ಕೆ ತುಪ್ಪ ಸುರಿದಂತಾಗಿದೆ.

ಪಾಕಿಸ್ತಾನದಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆಗಳು ಹಳಿ ತಪ್ಪಿದರೆ ಅದಕ್ಕೆ ಚೀನಾ ಮತ್ತು ಇರಾನ್ ನೇರ ಹೊಣೆ ಎಂದು ಟ್ರಂಪ್ ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಜಗತ್ತಿನ ಎರಡು ಬಲಿಷ್ಠ ರಾಷ್ಟ್ರಗಳು ನೇರ ಯುದ್ಧಕ್ಕೆ ಸನ್ನದ್ಧವಾಗಿರುವುದು ಜಾಗತಿಕ ಆತಂಕಕ್ಕೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !