ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜಯಭೇರಿ ಬಾರಿಸಿತು. ಆದರೆ, ಈ ಸಂಭ್ರಮದ ನಡುವೆಯೇ ನಾಯಕ ರುತುರಾಜ್ ಗಾಯಕ್ವಾಡ್ಗೆ ಐಪಿಎಲ್ ಆಡಳಿತ ಮಂಡಳಿ ಭಾರಿ ದಂಡ ವಿಧಿಸಿ ಶಾಕ್ ನೀಡಿದೆ.
ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ನಿಗದಿತ ಸಮಯದೊಳಗೆ ಓವರ್ಗಳನ್ನು ಪೂರ್ಣಗೊಳಿಸಲು ವಿಫಲವಾದ ಕಾರಣಕ್ಕಾಗಿ ಗಾಯಕ್ವಾಡ್ ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇದು ಈ ಸೀಸನ್ನಲ್ಲಿ ಸಿಎಸ್ಕೆ ಮಾಡಿದ ಮೊದಲ ತಪ್ಪಾದ್ದರಿಂದ ಕನಿಷ್ಠ ದಂಡದ ಮೊತ್ತವನ್ನು ವಿಧಿಸಲಾಗಿದೆ.
ಐಪಿಎಲ್ ನಿಯಮಗಳ ಪ್ರಕಾರ ಪ್ರತಿ ತಂಡವು 20 ಓವರ್ಗಳನ್ನು 90 ನಿಮಿಷಗಳಲ್ಲಿ ಮುಗಿಸಬೇಕು. ಒಂದು ವೇಳೆ ವಿಳಂಬವಾದರೆ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ಮೊದಲ ತಪ್ಪು: ನಾಯಕನಿಗೆ 12 ಲಕ್ಷ ರೂ. ದಂಡ. ಪಂದ್ಯದ ವೇಳೆ ಬೌಂಡರಿ ಲೈನ್ನಲ್ಲಿ ಒಬ್ಬ ಫೀಲ್ಡರ್ ಕಡಿತ.
ಎರಡನೇ ತಪ್ಪು: ನಾಯಕನಿಗೆ 24 ಲಕ್ಷ ರೂ. ದಂಡ. ತಂಡದ ಉಳಿದ ಆಟಗಾರರಿಗೆ ತಲಾ 6 ಲಕ್ಷ ರೂ. ಅಥವಾ ಪಂದ್ಯದ ಶುಲ್ಕದ ಶೇ. 25 ರಷ್ಟು ದಂಡ.
ಮೂರನೇ ತಪ್ಪು: ನಾಯಕನಿಗೆ 30 ಲಕ್ಷ ರೂ. ದಂಡದ ಜೊತೆಗೆ ಒಂದು ಪಂದ್ಯದ ನಿಷೇಧ. ಉಳಿದ ಆಟಗಾರರಿಗೆ ತಲಾ 12 ಲಕ್ಷ ರೂ. ಅಥವಾ ಪಂದ್ಯದ ಶುಲ್ಕದ ಶೇ. 50 ರಷ್ಟು ದಂಡ.



