ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ಮಹತ್ವದ ಮಾತುಕತೆಗಳು ಹಠಾತ್ ಸ್ಥಗಿತಗೊಂಡಿವೆ. ಇದಕ್ಕೆ ಅಮೆರಿಕದ ಅಸಮಂಜಸ ಬೇಡಿಕೆಗಳೇ ಮುಖ್ಯ ಕಾರಣ ಎಂದು ಇರಾನ್ ಗಂಭೀರ ಆರೋಪ ಮಾಡಿದೆ.
ತನ್ನ ದೇಶದ ಜನರ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ಇರಾನ್ ನಿಯೋಗವು ಬರೋಬ್ಬರಿ 21 ಗಂಟೆಗಳ ಕಾಲ ಸತತವಾಗಿ ಮಾತುಕತೆಯಲ್ಲಿ ತೊಡಗಿತ್ತು. ಇರಾನ್ ಹಲವು ಸಕಾರಾತ್ಮಕ ಉಪಕ್ರಮಗಳನ್ನು ಮುಂದಿಟ್ಟರೂ ಸಹ, ಅಮೆರಿಕವು ಪಟ್ಟುಹಿಡಿದ ಕೆಲವು ಅವಾಸ್ತವಿಕ ಬೇಡಿಕೆಗಳಿಂದಾಗಿ ಪ್ರಗತಿ ಸಾಧ್ಯವಾಗಲಿಲ್ಲ ಎಂದು ಇರಾನ್ ರಾಜ್ಯ ಪ್ರಸಾರಕರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕೈ, “ಕೇವಲ ಒಂದೇ ಅಧಿವೇಶನದಲ್ಲಿ ಎಲ್ಲಾ ಸಮಸ್ಯೆಗಳು ಬಗೆಹರಿದು ಒಪ್ಪಂದವಾಗುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ, ಅಂತಹ ನಿರೀಕ್ಷೆ ಯಾರಿಗೂ ಇರಬಾರದು,” ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಪಾಕಿಸ್ತಾನ ಮತ್ತು ಈ ಭಾಗದ ಇತರ ಮಿತ್ರ ರಾಷ್ಟ್ರಗಳೊಂದಿಗೆ ಸಂಪರ್ಕ ಮುಂದುವರಿಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ವಿಶ್ವದ ಒಟ್ಟು ತೈಲ ಸಾಗಣೆಯ ಐದನೇ ಒಂದು ಭಾಗದಷ್ಟು ಪಾಲು ಹೊಂದಿರುವ ಆಯಕಟ್ಟಿನ ಪ್ರದೇಶ ‘ಹಾರ್ಮುಜ್ ಜಲಸಂಧಿ’ಯ ಮೇಲೆ ನಿಯಂತ್ರಣ ಸಾಧಿಸಲು ಅಮೆರಿಕ ಯತ್ನಿಸುತ್ತಿದೆ ಎಂಬುದು ಇರಾನ್ ವಾದ. ಯುದ್ಧದ ಮೂಲಕ ಪಡೆಯಲಾಗದ ರಿಯಾಯಿತಿಗಳನ್ನು ಮತ್ತು ಪರಮಾಣು ಸಾಮಗ್ರಿಗಳ ತೆರವುಗೊಳಿಸುವಿಕೆಯಂತಹ ಕಠಿಣ ಷರತ್ತುಗಳನ್ನು ಅಮೆರಿಕ ಮಾತುಕತೆಯ ಮೇಜಿನ ಮೇಲೆ ಹೇರುತ್ತಿದೆ ಎಂದು ಇರಾನ್ ದೂರಿದೆ.



