ಹೊಸದಿಗಂತ ವರದಿ ಕಾರವಾರ:
ನಾರಿ ಶಕ್ತಿ ವಂದನಾ ಅಧಿನಿಯಮವು ಭಾರತದ ಮಹಿಳಾ ಶಕ್ತಿಗೆ ಸಲ್ಲಿಸುವ ಮಹತ್ತರ ಗೌರವದ ಸಂಕೇತವಾಗಿದೆ. ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಈ ಮಸೂದೆಯನ್ನು ಪಕ್ಷಾತೀತವಾಗಿ ಎಲ್ಲರೂ ಸಂಸತ್ತಿನ ಉಭಯ ಸದನಗಳಲ್ಲಿ ಬೆಂಬಲಿಸಬೇಕು ಎಂದು ಭಾಜಪಾ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ಮನವಿ ಮಾಡಿದರು.
ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರವು ಈ ಅಧಿನಿಯಮದ ಮೂಲಕ ಮಹಿಳೆಯರನ್ನು ನಿರ್ಧಾರಾತ್ಮಕ ಸ್ಥಾನಗಳಲ್ಲಿ ಸ್ಥಾಪಿಸಿ, ದೇಶ ಮತ್ತು ರಾಜ್ಯಗಳ ನೀತಿ ರೂಪಣೆಯಲ್ಲಿ ಅವರ ಧ್ವನಿಗೆ ನ್ಯಾಯ ಸಿಗುವಂತೆ ಮಾಡುವ ಸಂಕಲ್ಪವನ್ನು ವ್ಯಕ್ತಪಡಿಸಿದೆ. ಮಹಿಳೆಯರು ಕೇವಲ ಕುಟುಂಬದ ಅಡಿಪಾಯವಲ್ಲ, ಮಹಿಳೆಯರಿಗೆ ರಾಜಕೀಯ ಹಾಗೂ ಆಡಳಿತ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳನ್ನು ಒದಗಿಸುವ ದಿಕ್ಕಿನಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ಇದು ಮಹಿಳಾ ಸಬಲೀಕರಣದ ಪರಿಪೂರ್ಣ ರೂಪವಾಗಿದ್ದು, ಸಮಾನತೆ,ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿ, ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರು ಪ್ರಮುಖ ಶಕ್ತಿಯಾಗಬೇಕು ಎಂಬ ಉದ್ದೇಶದಿಂದ ರೂಪುಗೊಂಡ ಈ ಯೋಜನೆ ಇದಾಗಿದೆ ಎಂದರು.
ಇದನ್ನೂ ಓದಿ:
ದೇಶದ ಸಮಸ್ತ ಮಹಿಳೆಯರ ಪರವಾಗಿ, ನಾರಿ ಶಕ್ತಿ ವಂದನಾ ಅಧಿನಿಯಮವನ್ನು ಜಾರಿಗೆ ತರಲು ಮುಂದಾದ ಕೇಂದ್ರ ಸರ್ಕಾರಕ್ಕೆ ಮತ್ತು ನಮ್ಮ ನೆಚ್ಚಿನ ಪ್ರಧಾನ ಮಂತ್ರಿನರೇಂದ್ರ ಮೋದಿಜಿರವರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದರು.
ಪ್ರಧಾನಿ ಮೋದಿಯವರ ಆಡಳಿತದಲ್ಲಿ ಕೇಂದ್ರದ ಹಲವು ಯೋಜನೆಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಒಬ್ಬ ಸಾಮಾನ್ಯ ಮಹಿಳೆಯನ್ನು ಈ ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿದ್ದಾರೆ. ಇನ್ನು ಪಕ್ಷ ಹಾಗೂ ಸರ್ಕಾರದ ನಿರ್ಧಾರಗಳಲ್ಲಿ ಮಹಿಳೆಯರಿಗೆ ವಿಶೇಷ ಒತ್ತನ್ನು ನೀಡಲಾಗುತ್ತಿದೆ.ಇತ್ತೀಚಿನ ದಿನಗಳಲ್ಲಿ ಎಲ್ಲಾ ರಂಗಗಳಲ್ಲಿ ಮಹಿಳಾ ಪಾಲುದಾರಿಕೆ ಹೆಚ್ಚಳವಾಗಿದೆ. ನಾರಿಶಕ್ತಿಗೆ ಇನ್ನಷ್ಟು ಬಲ ತುಂಬುವ ನಿಟ್ಟಿನಲ್ಲಿ ಈ ಮಹಿಳಾ ಮೀಸಲಾತಿ ಕೆಲಸ ಮಾಡಲಿದೆ ಎಂಬ ವಿಶ್ವಾಸ ರೂಪಾಲಿ ನಾಯ್ಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಾಲಾ ಹುಲಸ್ವಾರ್, ಕಲ್ಪನಾ ನಾಯ್ಕ, ನಯನಾ ನೀಲಾವರ, ರೇಷ್ಮಾ ಮಾಳೇಕರ್ ಹಾಗೂ ಇನ್ನಿತರರು ಇದ್ದರು.



