ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 20ನೇ ಹಣಾಹಣಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 18 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಆರ್ಸಿಬಿ ಮತ್ತೆ ಗೆಲುವಿನ ಹಳಿಗೆ ಮರಳಿದ್ದರೆ, ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಸತತ ಮೂರನೇ ಸೋಲಿನ ಆಘಾತ ಅನುಭವಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡಕ್ಕೆ ಆರಂಭಿಕರಾದ ಫಿಲ್ ಸಾಲ್ಟ್ (78 ರನ್, 36 ಎಸೆತ) ಮತ್ತು ವಿರಾಟ್ ಕೊಹ್ಲಿ (50 ರನ್, 38 ಎಸೆತ) ಮೊದಲ ವಿಕೆಟ್ಗೆ 120 ರನ್ಗಳ ಸ್ಫೋಟಕ ಅಡಿಪಾಯ ಹಾಕಿಕೊಟ್ಟರು. ನಂತರ ಬಂದ ನಾಯಕ ರಜತ್ ಪಾಟಿದಾರ್ ಕೇವಲ 20 ಎಸೆತಗಳಲ್ಲಿ 53 ರನ್ ಸಿಡಿಸಿ ಮುಂಬೈ ಬೌಲರ್ಗಳನ್ನು ಕಂಗೆಡಿಸಿದರು. ಅಂತ್ಯದಲ್ಲಿ ಟಿಮ್ ಡೇವಿಡ್ (34*) ಅಬ್ಬರದಿಂದ ಆರ್ಸಿಬಿ 20 ಓವರ್ಗಳಲ್ಲಿ ಬೃಹತ್ ಮೊತ್ತ ಕಲೆಹಾಕಿತು.
242 ರನ್ಗಳ ಗುರಿ ಬೆನ್ನಟ್ಟಿದ ಮುಂಬೈಗೆ ಆರಂಭದಲ್ಲೇ ಆಘಾತ ಎದುರಾಯಿತು. ಭರ್ಜರಿ ಫಾರ್ಮ್ನಲ್ಲಿದ್ದ ರೋಹಿತ್ ಶರ್ಮಾ 6ನೇ ಓವರ್ನಲ್ಲಿ ಗಾಯಗೊಂಡು ಮೈದಾನ ತೊರೆದದ್ದು ತಂಡಕ್ಕೆ ಹಿನ್ನಡೆಯಾಯಿತು. ರಯಾನ್ ರಿಕಲ್ಟನ್ (37), ಸೂರ್ಯಕುಮಾರ್ ಯಾದವ್ (33) ಮತ್ತು ಹಾರ್ದಿಕ್ ಪಾಂಡ್ಯ (40) ಉಪಯುಕ್ತ ರನ್ ಗಳಿಸಿದರೂ ದೊಡ್ಡ ಇನ್ನಿಂಗ್ಸ್ ಆಡಲು ವಿಫಲರಾದರು.
ಕೊನೆಯಲ್ಲಿ ಶೆರ್ಫೇನ್ ರುದರ್ಫೋರ್ಡ್ ಕೇವಲ 31 ಎಸೆತಗಳಲ್ಲಿ 71 ರನ್ ಸಿಡಿಸಿ ಏಕಾಂಗಿ ಹೋರಾಟ ನಡೆಸಿದರೂ, ಮುಂಬೈ ತಂಡ 222 ರನ್ಗಳಿಗೆ ಸೀಮಿತವಾಯಿತು. ಆರ್ಸಿಬಿ ಪರ ಸುಯಾಶ್ ಶರ್ಮಾ 2 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.



