April 14, 2026
Tuesday, April 14, 2026
spot_img

ಬಾವಿಯಲ್ಲಿ ಬಾಲಕಿಯರಿಬ್ಬರ ಮೃತದೇಹ ಪತ್ತೆ, ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ

ಹೊಸದಿಗಂತ ವರದಿ ಕಲಬುರಗಿ:

ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಇಜೇರಿ ಗ್ರಾಮದಲ್ಲಿ ಅನುಮಾನಾಸ್ಪದ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ಬಾವಿಯಲ್ಲಿ ಇಬ್ಬರು ಬಾಲಕಿಯರ ಶವಗಳು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮೃತ ಬಾಲಕಿಯರನ್ನು ನಂದಿನಿ (16) ಮತ್ತು ಸಂಜನಾ (17) ಎಂದು ಗುರುತಿಸಲಾಗಿದೆ. ಇವರು ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳಾಗಿದ್ದು, ಸಹೋದರಿಯರಂತೆ ಬೆಳೆದಿದ್ದರು ಎಂದು ತಿಳಿದುಬಂದಿದೆ.

ಘಟನಾ ಸ್ಥಳದಲ್ಲಿ ಇಬ್ಬರ ಶವಗಳೂ ಕೈಗಳಿಗೆ ಹಗ್ಗ ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣಕ್ಕೆ ಮತ್ತಷ್ಟು ನಿಗೂಢತೆ ಹೆಚ್ಚಿಸಿದೆ. ಈ ಇಬ್ಬರು ಬಾಲಕಿಯರ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.

ಶವಗಳನ್ನು ಕಂಡ ಕುಟುಂಬಸ್ಥರು ದಿಗ್ಭ್ರಮೆಗೆ ಒಳಗಾಗಿ ಕಣ್ಣೀರಿಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

ಈ ಘಟನೆ ಆತ್ಮಹತ್ಯೆಯೋ ಅಥವಾ ಇನ್ನಾವುದೇ ಅನುಮಾನಾಸ್ಪದ ಕಾರಣವೋ ಎಂಬುದರ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !